ಬಳ್ಳಾರಿ ಗಲಭೆಗೆ ತಲೆದಂಡ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್ ನೆಜ್ಜೂರು?
ಬಳ್ಳಾರಿ ಹಿಂಸಾಚಾರ ಪ್ರಕರಣದ ಬೆನ್ನಲ್ಲೇ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಮಾಹಿತಿ ಅಧಿಕೃತವಾಗಿ ದೃಢಪಟ್ಟಿಲ್ಲ. ಬಳ್ಳಾರಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸಲಾಗಿತ್ತು.
ಬೆಂಗಳೂರು, ಜನವರಿ 3: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ನಡೆದ ಹಿಂಸಾಚಾರದ ಬೆನ್ನಲ್ಲೇ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡುತ್ತಿವೆ. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಸುದ್ದಿಯನ್ನು ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.
ಬಳ್ಳಾರಿಯಲ್ಲಿ ಡ್ಯೂಟಿಗೆ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ ಕರ್ತವ್ಯ ಲೋಪದ ಆರೋಪದಡಿ ಪವನ್ ನಜ್ಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. 11 ವರ್ಷಗಳ ನಂತರ ಅವರಿಗೆ ಈ ಎಕ್ಸಿಕ್ಯೂಟಿವ್ ಹುದ್ದೆ ಸಿಕ್ಕಿತ್ತು. ಈ ಅಮಾನತು ಆದೇಶದಿಂದ ಮನನೊಂದು ಅವರು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಈ ಬಗ್ಗೆ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಲಭ್ಯವಾಗಬೇಕಿದೆ.
