ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು

Updated on: Dec 23, 2025 | 7:15 AM

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ಭಾರಿ ಸಿದ್ಧತೆ ಮಾಡಿಕೊಂಡಿದೆ. ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ವುಮೆನ್ ಹೆಲ್ಪ್ ಡೆಸ್ಕ್ ಮತ್ತು ಚೆನ್ನಮ್ಮ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ. ಡ್ರಗ್ಸ್ ಹಾಗೂ ರೇವ್ ಪಾರ್ಟಿಗಳಿಗೆ ಅವಕಾಶವಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ತಡೆಯಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ.

ಬೆಂಗಳೂರು, ಡಿಸೆಂಬರ್ 23: ಹೊಸ ವರ್ಷಾಚರಣೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಬೆಂಗಳೂರು ನಗರದಲ್ಲಿ ಜನ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದೆ. ‘ಸೆಲೆಬ್ರೇಷನ್ ವಿತ್ ರೆಸ್ಪಾನ್ಸಿಬಿಲಿಟಿ’ ಎಂಬ ಆನ್‌ಲೈನ್ ಅಭಿಯಾನ ಆರಂಭಿಸಲಾಗಿದ್ದು, ಸಾರ್ವಜನಿಕರಿಗೆ ಸಹಾಯ ಮಾಡಲು ಕ್ಯೂಆರ್ ಕೋಡ್ ಅಭಿವೃದ್ಧಿಪಡಿಸಲಾಗಿದೆ. ಈ ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು ಅಥವಾ ಮಾಹಿತಿ ಪಡೆಯಬಹುದು. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವುಮೆನ್ ಹೆಲ್ಪ್ ಡೆಸ್ಕ್ ಹಾಗೂ ಚೆನ್ನಮ್ಮ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿ ಕ್ಯಾಮರಾಗಳು, ಸರ್ವೆಲೆನ್ಸ್ ಕ್ಯಾಮೆರಾಗಳು, ಎಫ್‌ಆರ್‌ಸಿಎಸ್ ಮತ್ತು ಎಎನ್‌ಪಿಆರ್ ಕ್ಯಾಮೆರಾಗಳನ್ನು ಬಳಸಲಾಗುವುದು. ರೇವ್ ಪಾರ್ಟಿಗಳು, ಡ್ರಗ್ಸ್ ಪಾರ್ಟಿಗಳು ಮತ್ತು ಡ್ರಂಕ್ ಅಂಡ್ ಡ್ರೈವ್‌ಗೆ ಅವಕಾಶವಿಲ್ಲ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಸಂಭ್ರಮದ ವೇಳೆ ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗೆ ಜಂಟಿ ಕಾರ್ಯಾಚರಣೆ ನಡೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 23, 2025 07:13 AM