ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಬಾನು ಮುಷ್ತಾಕ್ ಟಾಂಗ್
ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಸುತ್ತ ರಾಜಕೀಯ ಚರ್ಚೆ ಗರಿಗೆದರಿದೆ. ಕರುನಾಡಿಗೆ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ಅಪಸ್ವರ ಎತ್ತಿದೆ. ಆದ್ರೆ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಮತ್ತೊಂದೆಡೆ ನಡೆಯುತ್ತಿರುವ ಎಲ್ಲ ಚರ್ಚೆಗಳ ಬಗ್ಗೆಯೂ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಮಾತನಾಡಿದ್ದು, ಟೀಕಾಕಾರರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಹಾಸನ, (ಆಗಸ್ಟ್ 26): ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಸುತ್ತ ರಾಜಕೀಯ ಚರ್ಚೆ ಗರಿಗೆದರಿದೆ. ಕರುನಾಡಿಗೆ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ಅಪಸ್ವರ ಎತ್ತಿದೆ. ಈ ಬೆಳವಣಿಗಗಳ ನಡುವೆ ಖುದ್ದು ಬಾನು ಮುಷ್ತಾಕ್ ಪ್ರತಿಕ್ರಿಯಿಸಿದ್ದು, ಟೀಕಾಕಾರರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿ ಬಾನು ಮುಷ್ತಾಕ್, ನನ್ನ ಗೆಳತಿ ಲೇಖಕಿ ಮೈಸೂರಿನ ಮೀನಾ ಮೈಸೂರು ನನಗೆ ಬೂಕರ್ ಅವಾರ್ಡ್ ಬರಲಿ ಎಂದು ಚಾಮುಂಡೇಶ್ವರಿ ಗೆ ಹರಕೆ ಹೊತ್ತಿದ್ದರಂತೆ. ನನ್ನ ಕೃತಿ ಲಿಸ್ಟ್ ನಲ್ಲಿ ಬಂದಾಗ ಹರಕೆ ಹೊತ್ತಿದ್ದರಂತೆ. ಈ ವಿಚಾರ ಕೇಳಿ ನಾನು ಸಂತೋಷ ಪಟ್ಟಿದ್ದೆ. ಬೂಕರ್ ಅವಾರ್ಡ್ ಬಳಿಕ ಲಿಡ್ ಫೆಸ್ಟಿವಲ್ ಸಂದರ್ಭದಲ್ಲಿ ಮೈಸೂರಿಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕಿದ್ದ ಗೆಳತಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರುಸೋಣ ಎಂದಿದ್ದರು. ಆಗಲೂ ಸಮಯದ ಕೊರತೆಯಿಂದ ಹೋಗಲು ಆಗಿರಲಿಲ್ಲ. ಮತ್ತೆ ಸದ್ಯದಲ್ಲಿ ಬರುವುದಾಗಿ ಹೇಳಿ ಬಂದಿದ್ದೆ. ಆದರೆ ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದರು.

