Debate over language: ಸಭಾಧ್ಯಕ್ಷ ಯುಟಿ ಖಾದರ್ ಬಳಸುವ ಭಾಷೆ ಸದನದ ಸದಸ್ಯರಿಗೆ ಅರ್ಥಮಾಡಿಸುವ ಆ್ಯಪ್ ಬೇಕೆಂದು ಆಗ್ರಹಿಸಿದ ಬಸನಗೌಡ ಯತ್ನಾಳ್!
ಲೋಕ ಸಭೆಯಲ್ಲಿ ಇಂಗ್ಲಿಷ್ ಭಾಷೆ ಹಿಂದಿಗೆ ಮತ್ತು ಇತರ ಭಾಷೆಗಳಿಗೆ ತರ್ಜುಮೆ ಆಗುವ ವ್ಯವಸ್ಥೆ ಇರುವಂತೆ ಇಲ್ಲೂ ಮಾಡಿಸಿಕೊಡಿ ಅಂತ ಯತ್ನಾಳ್ ಹೇಳಿದಾಗಲೂ ಸದಸ್ಯರಿಂದ ಜೋರು ನಗು!
ಬೆಂಗಳೂರು: ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರ ಕರಾವಳಿ ಕನ್ನಡದಿಂದ ಸದನದ ಸದಸ್ಯರಿಗೆ ಸಮಸ್ಯೆಯಾಗುತ್ತಿದೆ. ಅವರು ಮಾತಾಡುವಾಗ ಕೆಲವು ಪದಗಳನ್ನು ಅವಸರದಲ್ಲಿ ಹೇಳುತ್ತಾರೆ ಇಲ್ಲವೇ ನುಂಗಿ ಬಿಡುತ್ತಾರೆ. ರಾಜ್ಯದ ಯಾವುದೇ ಭಾಗದಲ್ಲಿ ನಿಂತು ಮಾತಾಡುತ್ತಿದ್ದರೂ ವಿಜಯಪುರದ ಕನ್ನಡವನ್ನೇ ಬಳಸಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾತಾಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸ್ಪೀಕರ್ ಅವರ ಭಾಷೆಯನ್ನು ಅವರಿಗೆ ನೋವಾಗದ ಹಾಗೆ ಗೇಲಿ (ridicule) ಮಾಡಿದರು. ಸದನದಲ್ಲಿರುವ ಸದಸ್ಯರಿಗೆ ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಪ್ರಾಂತ್ಯ-ಮೊದಲಾದ ಕಡೆಗಳಲ್ಲಿ ಆಡುವ ಭಾಷೆ ಅರ್ಥವಾಗುತ್ತದೆ ಆದರೆ ಸ್ಪೀಕರ್ ಆಡುವ ಭಾಷೆ ಅರ್ಥವಾಗೋದಿಲ್ಲ, ಹಾಗಾಗೇ, ಅವರಾಡುವ ಭಾಷೆ ಎಲ್ಲ ಸದಸ್ಯರಿಗೆ ಅರ್ಥವಾಗುವ ಹಾಗೆ ಒಂದು ಆ್ಯಪ್ ಹಾಕಿಸಿಕೊಡಬೇಕು ಅಂತ ಸಭಾಧ್ಯಕ್ಷರನ್ನು ಆಗ್ರಹಿಸಿದಾಗ ಸ್ಪೀಕರ್ ಸೇರಿದಂತೆ ಇಡೀ ಸದನ ನಗೆಗಡಲಲ್ಲಿ ಮುಳಗುತ್ತದೆ. ಲೋಕ ಸಭೆಯಲ್ಲಿ ಇಂಗ್ಲಿಷ್ ಭಾಷೆ ಹಿಂದಿಗೆ ಮತ್ತು ಇತರ ಭಾಷೆಗಳಿಗೆ ತರ್ಜುಮೆ ಆಗುವ ವ್ಯವಸ್ಥೆ ಇರುವಂತೆ ಇಲ್ಲೂ ಮಾಡಿಸಿಕೊಡಿ ಅಂತ ಯತ್ನಾಳ್ ಹೇಳಿದಾಗಲೂ ಸದಸ್ಯರಿಂದ ಜೋರು ನಗು. ನಿಮ್ಮ ಸಮಸ್ಯೆಯನ್ನು ನೀಗಿಸುವುದಕ್ಕಾಗಿಯೇ ಸದನವನ್ನು ಡಿಜಿಟಲೈಸ್ ಮಾಡುವ ಪ್ರಸ್ತಾಪ ಇದೆ ಎಂದು ನಗುತ್ತಾ ಸ್ಪೀಕರ್ ಪ್ರತಿಕ್ರಿಯಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ