ಬೆಳಗಾವಿ ಅಧಿವೇಶನ ಮೋಜು-ಮಸ್ತಿಗೆ ನಡೆಯುತ್ತಾ!? ಏನಂದ್ರು ಖಾದರ್?
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಬೆಳಗಾವಿ ಅಧಿವೇಶನ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಲಹರಣದ ಆರೋಪಗಳನ್ನು ತಳ್ಳಿ ಹಾಕಿದ ಅವರು, ಶಾಸಕರು ಸಕಾರಾತ್ಮಕವಾಗಿ ಪಾಲ್ಗೊಳ್ಳುತ್ತಾರೆ ಎಂದರು. ಹಲವು ವರ್ಷಗಳಿಂದ ಕೇಳಿಬರುತ್ತಿರುವ ಪ್ರತ್ಯೇಕ ರಾಜ್ಯದ ಬೇಡಿಕೆಯ ಬಗ್ಗೆ ಶಾಸಕ ರಾಜು ಕಾಗೆ ಜೊತೆ ಚರ್ಚಿಸುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಸದನದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.
ಬೀದರ್, ನವೆಂಬರ್ 14: ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್ 8 ರಿಂದ 19 ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಬೀದರ್ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಧಿವೇಶನವು ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿವೇಶನವು ಕೇವಲ ಕಾಲಹರಣವಾಗುತ್ತದೆ, ಮೋಜು-ಮಸ್ತಿಗಾಗಿ ಎಂದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಆರೋಪಗಳನ್ನು ಸ್ಪೀಕರ್ ತಳ್ಳಿಹಾಕಿದರು. ನಾವು ಸಕಾರಾತ್ಮಕ ಚಿಂತನೆಯಲ್ಲಿ ಇರಬೇಕು. ಬಹುತೇಕ ಎಲ್ಲ ಶಾಸಕರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಚರ್ಚೆಗಳು ರಾತ್ರಿ 1, 1:30 ರವರೆಗೂ ನಡೆದಿವೆ ಮತ್ತು ಬಹಳಷ್ಟು ಮಸೂದೆಗಳು ಪಾಸ್ ಆಗಿವೆ ಎಂದು ಸ್ಪೀಕರ್ ಖಾದರ್ ವಿವರಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಈ ಅಧಿವೇಶನಕ್ಕೆ ಜನಸಾಮಾನ್ಯರು, ಮಾಧ್ಯಮದವರು ಮತ್ತು ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು. ಕರ್ನಾಟಕದ ಜನತೆಗೆ ಪ್ರಯೋಜನವಾಗುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಲು ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು. ಪ್ರತ್ಯೇಕ ರಾಜ್ಯದ ಬೇಡಿಕೆಯ ಕುರಿತು ಕೇಳಿದಾಗ, ಶಾಸಕ ರಾಜು ಕಾಗೆ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಖಾದರ್ ತಿಳಿಸಿದರು. ಶಾಸಕರು, ಸರ್ಕಾರ ಮತ್ತು ವಿರೋಧ ಪಕ್ಷದವರು ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎಂದು ಅವರು ಒತ್ತಿ ಹೇಳಿದರು.
