ವಂಟಮೂರಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ: ಆರೋಪಿಗಳು ಬಿಡುಗಡೆ, ಪಟಾಕಿ ಸಿಡಿಸಿ ಸಂಭ್ರಮ
2023ರ ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ, ಪ್ರೀತಿ ವಿಚಾರವಾಗಿ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಪ್ರಕರಣದ ಆರೋಪಿಗಳು ಬಿಡುಗಡೆಯಾಗಿದ್ದು, ಅವರ ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಬೆಳಗಾವಿ, ಏಪ್ರಿಲ್ 23: ಕಳೆದ ವರ್ಷ ಡಿಸೆಂಬರ್ನಲ್ಲಿ ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದಲ್ಲಿ (Vantmuri Village) ಮಹಿಳೆಯನ್ನು ವಿವಸ್ತ್ರಗೊಳಿಸಿ (Assault on Women) ಹಲ್ಲೆ ಮಾಡಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದು, ರಾಜ್ಯ ತಲೆ ತಗ್ಗಿಸುವಂತೆ ಮಾಡಿತ್ತು. ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಗಳು ನಾಲ್ಕು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾಗುತ್ತಿದ್ದಂತೆ ಆರೋಪಿಗಳಿಗೆ ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ.
2023ರ ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ, ಪ್ರೀತಿ ವಿಚಾರವಾಗಿ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಕಾಕತಿ ಠಾಣೆ ಪೊಲೀಸರು 13 ಆರೋಪಿಗಳನ್ನ ಬಂಧಿಸಿ, ಹಿಂಡಲಗಾ ಜೈಲಿನಲ್ಲಿ ಇರಸಿದ್ದರು. ಇದೀಗ ಹೈಕೋರ್ಟ್ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಹೀಗಾಗಿ ಆರೋಪಿಗಳು ಸೋಮವಾರ (ಏ.22) ರಾತ್ರಿ ಜೈಲಿನಿಂದ ಬಿಡುಗಡೆಯಾದರು.
ಜೈಲಿನ ಎದುರೇ ಪ್ರಮುಖ ಆರೋಪಿ ಬಸಪ್ಪ ನಾಯ್ಕ್‌ಗೆ ಹೂಮಾಲೆ ಹಾಕಿ, ಸಿಹಿ ತಿನಿಸಿ ಸ್ವಾಗತಿಸಲಾಯಿತು. ಅಲ್ಲದೇ ಆರೋಪಿಗಳನ್ನು ವಂಟಮೂರಿ ಗ್ರಾಮದಲ್ಲಿ ಮೆರವಣಿಗೆ ಮಾಡಲು ಆರೋಪಿಯ ಬೆಂಬಲಿಗರು ಮುಂದಾಗಿದ್ದರು. ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮೆರವಣಿಗೆ ಕೈ ಬಿಟ್ಟು ಪಟಾಕಿ ಸಿಡಿಸಿ ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಜೈಲಿನ ಎದುರು ನಡೆದ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ