“ಮಗುವಿನ ಚಿಕಿತ್ಸೆಗೆ 1 ರೂಪಾಯಿಯನ್ನೂ ಕೇಳಲ್ಲ”: ಹೆಚ್.ಡಿ. ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ಉಚಿತ ಆರೈಕೆಯ ಅಭಯ ನೀಡಿದ ಆಸ್ಪತ್ರೆ

Edited By:

Updated on: Nov 09, 2026 | 9:32 PM

ಬೆಂಗಳೂರಿನ ಖ್ಯಾತ ಆಸ್ಪತ್ರೆಯು 3 ತಿಂಗಳ ಮಗುವಿನ ಚಿಕಿತ್ಸೆಯಲ್ಲಿನ ವೈಫಲ್ಯ, ಅರವಳಿಕೆ ಲೋಪ ಆರೋಪಕ್ಕೆ ಸ್ಪಷ್ಟನೆ ನೀಡಿದೆ. ಸರ್ಕಾರಿ ವರದಿ ತಪ್ಪು ಎಂದ ಆಸ್ಪತ್ರೆ, ಮಗು ಹಾಲು ಕುಡಿದು ಬಂದ ಕಾರಣ ಮೆದುಳಿಗೆ ಹಾನಿಯಾಗಿದ್ದನ್ನು ಒಪ್ಪಿಕೊಂಡಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ, ಚೇತರಿಕೆ ನಿಧಾನ. ಆಸ್ಪತ್ರೆ ಮಗುವಿಗೆ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ.

ಬೆಂಗಳೂರು, ನ.9: ರಾಜಧಾನಿಯ ಖ್ಯಾತ ಆಸ್ಪತ್ರೆಯಲ್ಲಿ 3 ತಿಂಗಳ ಮಗುವಿಗೆ ನೀಡಲಾದ ಚಿಕಿತ್ಸೆಯಲ್ಲಿ ವೈಫಲ್ಯ ಹಾಗೂ ಅನಸ್ತೇಷಿಯಾ ಲೋಪವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರ ತಂಡ ಕೊನೆಗೂ ಮೌನ ಮುರಿದಿದೆ. “ಯಾವುದೇ ವೈದ್ಯರಿಗೂ ಮಗುವಿಗೆ ಈ ರೀತಿ ಮಾಡಬೇಕು ಎಂಬ ಉದ್ದೇಶವಿರುವುದಿಲ್ಲ. ಸರ್ಕಾರ ಈ ಪ್ರಕರಣದಲ್ಲಿ ತಪ್ಪು ವರದಿ ನೀಡಿದೆ. ನಾವು ಮಗುವಿನ ಸಂಪೂರ್ಣ ಚಿಕಿತ್ಸೆಯ ಆಸ್ಪತ್ರೆ ಬಿಲ್ ಕೇಳುವುದಿಲ್ಲ ಮತ್ತು ಎಷ್ಟು ದಿನ ಅಗತ್ಯವೋ ಅಷ್ಟು ದಿನ ಮಗುವನ್ನು ಉಚಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಆಸ್ಪತ್ರೆಯ ವೈದ್ಯರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. “ಮಗು ಹಾಲು ಕುಡಿದು ಬಂದಿದ್ದ ಕಾರಣ, ಆಕ್ಸಿಜನ್ ವ್ಯತ್ಯಾಸದಿಂದ ಮೆದುಳಿಗೆ ಹಾನಿಯಾಗಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಇದು ಒಂದೆರಡು ದಿನಗಳಲ್ಲಿ ಸರಿಹೋಗುವ ಸಮಸ್ಯೆಯಲ್ಲ, ಚೇತರಿಕೆ ಅತ್ಯಂತ ನಿಧಾನವಾಗಿ ನಡೆಯುತ್ತಿದೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.” ಎಂದು ಹೇಳಿದ್ದಾರೆ. “ಅನಸ್ತೇಷಿಯಾ ನೀಡಿದ ವೈದ್ಯರ ಬಗ್ಗೆ ಫನಾ ಮತ್ತು ಮೆಡಿಕಲ್ ಅಸೋಸಿಯೇಷನ್ ಪರಿಶೀಲನೆ ನಡೆಸಿದ್ದು, ಅವರು 14 ವರ್ಷಗಳ ಭಾರಿ ಅನುಭವ ಹೊಂದಿರುವ ಎಕ್ಸ್‌ಪರ್ಟ್ ಆಗಿದ್ದಾರೆ. ಆದರೆ ಸರ್ಕಾರ ತಪ್ಪು ವರದಿ ನೀಡಿದೆ. ಸದ್ಯಕ್ಕೆ ನಾವು ಸರ್ಕಾರದ ವಿರುದ್ಧ ಯಾವುದೇ ಹೋರಾಟಕ್ಕೆ ಇಳಿಯುವುದಿಲ್ಲ” ಎಂದು ವೈದ್ಯರು ತಿಳಿಸಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ನೇರವಾಗಿ ವರದಿ ಪಡೆದು ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ಮಗುವಿನ ಚೇತರಿಕೆಗೆ ಹೆಚ್ಚುವರಿ ತಜ್ಞ ವೈದ್ಯರ ಅವಶ್ಯಕತೆ ಇದ್ದರೆ ಅವರನ್ನು ಹೊರಗಿನಿಂದ ಕರೆಸಲು ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ. “ನಾವು ಇದುವರೆಗೆ ಪೋಷಕರಿಂದ ಯಾವುದೇ ಹಣ ಕೇಳಿಲ್ಲ. ಬಿಲ್ ರೈಸ್ ಮಾಡಿಲ್ಲ ಮತ್ತು ಮುಂದೆ ಕೇಳುವುದೂ ಇಲ್ಲ. ಮಗು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕೋ ಅಷ್ಟು ದಿನ ಸಂಪೂರ್ಣ ಆರೈಕೆ ಮಾಡುತ್ತೇವೆ” ಎಂದು ವೈದ್ಯರ ತಂಡ ಹೇಳಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​