ಇದು ರಸ್ತೆಯೋ ಅಥವಾ ಡಂಪಿಂಗ್ ಯಾರ್ಡೋ?: ಜನರ ಸಮಸ್ಯೆ ಕೇಳೋರ್‍ಯಾರು?
ಸರ್ವಜ್ಞನಗರ ಮತ್ತು ಪುಲಕೇಶಿನಗರಗಳಲ್ಲಿ ಕಸದ ರಾಶಿಗಳು ತುಂಬಿವೆ. ಒಂದು ತಿಂಗಳಿಂದ ಕಸ ಸಂಗ್ರಹಿಸದ ಜಿಬಿಎ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ. ಶಾಸಕರಾದ ಕೆ.ಜೆ. ಜಾರ್ಜ್ ಮತ್ತು ಎ.ಸಿ. ಶ್ರೀನಿವಾಸ್ ನಡುವಿನ ಕ್ಷೇತ್ರದ ವ್ಯಾಪ್ತಿ ಗೊಂದಲದಿಂದ ಸಮಸ್ಯೆ ಉಲ್ಬಣಿಸಿದ್ದು, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರಾತ್ರಿ ವೇಳೆಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆಂಗಳೂರು, ನವೆಂಬರ್ 25: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿರೋದು ಒಂದೆಡೆಯಾದರೆ, ಮನೆ ಮನೆಗಳಿಂದ ಕಸ ಸಂಗ್ರಹಿಸದ ಕಾರಣ ಸರ್ವಜ್ಞನಗರ ಮತ್ತು ಪುಲಕೇಶಿನಗರಗಳಲ್ಲಿ ರಸ್ತೆಗಳೇ ಡಂಪಿಂಗ್ ಯಾರ್ಡ್ಗಳಾಗಿ ಬದಲಾಗಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಂದು ತಿಂಗಳಿಂದ ಮನೆ ಮನೆಗಳಿಂದ ಕಸ ಸಂಗ್ರಹಿಸದಿರುವುದು ಇದಕ್ಕೆ ಮುಖ್ಯ ಕಾರಣ. ರಸ್ತೆಗಳ ಬದಿಯಲ್ಲಿ ನಾಗರಿಕರು ಕಸವನ್ನು ಸುರಿಯುತ್ತಿದ್ದು, ಇದು ಜಿಬಿಎ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರಾದ ಕೆ.ಜೆ. ಜಾರ್ಜ್ ಮತ್ತು ಎ.ಸಿ. ಶ್ರೀನಿವಾಸ್ ನಡುವಿನ ವ್ಯಾಪ್ತಿ ಗೊಂದಲದಿಂದ ಸಮಸ್ಯೆ ಉಲ್ಬಣಿಸಿದೆ. ರಸ್ತೆಯ ಒಂದು ಭಾಗ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ. ಜಾರ್ಜ್ ಅವರ ವ್ಯಾಪ್ತಿಗೆ ಬಂದರೆ, ಮತ್ತೊಂದು ಭಾಗ ಪುಲಕೇಶಿನಗರ ಕ್ಷೇತ್ರದ ಶಾಸಕ ಎ.ಸಿ. ಶ್ರೀನಿವಾಸ್ ಅವರ ವ್ಯಾಪ್ತಿಗೆ ಸೇರಿದೆ. ಇದರಿಂದ ಕಸ ತೆಗೆಯುವ ಜವಾಬ್ದಾರಿ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಕೊಳೆಯುತ್ತಿರುವ ಕಸದಿಂದ ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗುತ್ತಿವೆ. ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಕಳೆದ ಆರು ತಿಂಗಳಿಂದ ದೂರು ನೀಡುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
