ಸಿಎಂ ಡಿಕೆಶಿ ವಾರ್ನಿಂಗ್ ಬೆನ್ನಲ್ಲೇ ರೌಡಿಗಳಿಗೆ ನಡುರಾತ್ರಿ ಶಾಕ್; ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೌಡಿ ಸಂಸ್ಕೃತಿ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ನೀಡಿದ ಖಡಕ್ ಎಚ್ಚರಿಕೆಯ ನಂತರ, ಬೆಂಗಳೂರು ಪೊಲೀಸರು ವಿಶೇಷ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳು, ಮಾದಕ ದ್ರವ್ಯ ಜಾಲ ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು 400ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ನಗರದಾದ್ಯಂತ ದಾಳಿ, ನಾಕಾಬಂದಿ ಮೂಲಕ ವಾಹನ ತಪಾಸಣೆ ನಡೆಸಲಾಯಿತು, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಬೆಂಗಳೂರು, ಜು.10: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ರೌಡಿ ಸಂಸ್ಕೃತಿಗೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಮತ್ತು ದಾಂಧಲೆ ನಡೆಸುವ ರೌಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಿಎಂ ನೀಡಿದ ಈ ಖಡಕ್ ಆದೇಶದ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು, ನಗರದಲ್ಲಿ ತಡರಾತ್ರಿಯವರೆಗೂ ಭಾರಿ ಸದ್ದು ಮಾಡಿದ ವಿಶೇಷ ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ನಗರದಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಚಟುವಟಿಕೆಗಳು, ಮಾದಕ ದ್ರವ್ಯ ಜಾಲ ಹಾಗೂ ಅಪರಾಧ ಕೃತ್ಯಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ಉದ್ದೇಶದಿಂದ ಈ ಮೆಗಾ ಆಪರೇಷನ್ ನಡೆಸಲಾಗಿದೆ. ಬೆಂಗಳೂರು ನಗರದ ಕೇಂದ್ರ ವಿಭಾಗ ಮತ್ತು ಹೊರವಲಯದ ಗಡಿ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಹಕೇ ಅವರು ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಪ್ರಮುಖ ರಸ್ತೆಗಳು, ಶಂಕಾಸ್ಪದ ಪ್ರದೇಶಗಳು ಹಾಗೂ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿತ್ತು. ಈ ವಿಶೇಷ ಕಾರ್ಯಾಚರಣೆಗಾಗಿ ಇಲಾಖೆಯ 400ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ‘ನಾಕಾಬಂದಿ’ ನಿರ್ಮಿಸಲಾಗಿತ್ತು. ತಡರಾತ್ರಿ ಸಂಚರಿಸುತ್ತಿದ್ದ ನೂರಾರು ಅನುಮಾನಾಸ್ಪದ ವಾಹನಗಳನ್ನು ತಡೆದು ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಮತ್ತು ಸೂಕ್ತ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
