ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್ ಪಬ್‌ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ಗಳ ಮೇಲೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಡರಾತ್ರಿ ದಾಳಿ ನಡೆಸಲಾಗಿದೆ. ಪಬ್‌ಗಳು ನಿಗದಿತ ಸಮಯಕ್ಕೆ ಮುಚ್ಚುತ್ತಿವೆಯೇ, ಅಪ್ರಾಪ್ತರಿಗೆ ಮದ್ಯ ನೀಡಲಾಗುತ್ತಿದೆಯೇ ಮತ್ತು ನಿಯಮ ಉಲ್ಲಂಘನೆ ಆಗಿದೆಯೇ ಎಂಬುದನ್ನು ಪರಿಶೀಲಿಸಲು ಸಿಸಿಬಿ ಅಧಿಕಾರಿಗಳು ಸಹ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು, ಅಕ್ಟೋಬರ್ 10: ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಲೇಡಿಸ್ ಪಬ್‌ಗಳ ಮೇಲೆ ಶುಕ್ರವಾರ ತಡರಾತ್ರಿ ಪೊಲೀಸ್ ದಾಳಿ ನಡೆದಿದೆ. ಖುದ್ದು ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬ್ರಿಗೇಡ್ ಗಾರ್ಡನ್, ಪೇಜ್ ತ್ರೀ ಪಬ್ ಸೇರಿದಂತೆ ಹಲವು ಪಬ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಸಿಸಿಬಿ ಅಧಿಕಾರಿಗಳ ತಂಡ ಈ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಪಬ್‌ಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ, ಅದರಲ್ಲೂ ವಿಶೇಷವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಬಂದ್ ಆಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ದಾಳಿಯ ಮುಖ್ಯ ಉದ್ದೇಶವಾಗಿತ್ತು. ‘ಪಬ್‌ಗಳಿಗೆ ಸಮಯ ನಿಗದಿಪಡಿಸಲಾಗಿದೆ, ಆ ಸಮಯದೊಳಗೆ ಎಲ್ಲವೂ ಮುಚ್ಚಬೇಕು ಎಂದು ಸೂಚನೆಗಳಿವೆ. ನಾವು ಅದನ್ನು ಪರಿಶೀಲಿಸಲು ಬಂದಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಪಬ್‌ಗಳಲ್ಲಿ ಅಪ್ರಾಪ್ತರಿಗೆ ಮದ್ಯ ನೀಡಲಾಗುತ್ತಿದೆಯೇ ಎಂಬುದರ ಬಗ್ಗೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಪಬ್‌ಗಳು ಮುಚ್ಚಿದ ನಂತರ ಜನರಿಂದ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

