ರಾಮೇಶ್ವರಂ ಕೆಫೆ ಸ್ಫೋಟ: ಎನ್​ಐಎ ತನಿಖೆ ಆರಂಭ, ಕೆಫೆಯಲ್ಲಿ ಅಧಿಕಾರಿಗಳ ತಲಾಶ್

| Updated By: Ganapathi Sharma

Updated on: Mar 05, 2024 | 12:34 PM

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕೊನೆಗೂ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಹಿಸಿಕೊಂಡಿದೆ. ಎನ್​ಐಎ ಅಧಿಕಾರಿಗಳು ಮಂಗಳವಾರ ಕೆಫೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಸಿಸಿಟಿವಿ ದೃಶ್ಯ, ಸ್ಥಳದಲ್ಲಿದ್ದ ಸಾಕ್ಷ್ಯ ಸಂಗ್ರಹದ ಜತೆಗೆ ಕೆಫೆ ಸಿಬ್ಬಂದಿಯ ಬಳಿಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ಬೆಂಗಳೂರು, ಮಾರ್ಚ್​ 5: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಸ್ಫೋಟ (Bomb Blast) ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಅಧಿಕೃತವಾಗಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಘಟನೆ ಸಂಬಂಧ ಮಂಗಳವಾರ ತನಿಖೆ ಆರಂಭಿಸಿರುವ ಎನ್ಐಎ ಅಧಿಕಾರಿಗಳು ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದರು. ಸ್ಥಳ ಮಹಾಜರು ನಡೆಸಿ ನಂತರ ಕ್ಯಾಶ್ ಕೌಂಟರ್, ಸ್ಪೋಟ ಸಂಭವಿಸಿದ ಸ್ಥಳ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು.ಆ ಬಳಿಕ ಕೆಫೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಎನ್ಐಎ ಎಸ್‌ಪಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ಒಂದರಂದು ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆಯು ರಾಜ್ಯದಾದ್ಯಂತ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ನಂತರ ಸ್ಪೋಟದ ತನಿಖೆಯ ವಿಚಾರವಾಗಿ ಉನ್ನತ ಮಟ್ಟದ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯ ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ನಂತರ ಘಟನೆಯ ಗಂಭೀರತೆಯ ಕಾರಣ ತನಿಖೆಯ ಹೊಣೆಯನ್ನು ಎನ್​ಐಎಗೆ ವಹಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ: ಬೆಂಗಳೂರು ಜೈಲಿನ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಕೆ: ಬೆಂಗಳೂರು ಸೇರಿದಂತೆ 7 ರಾಜ್ಯಗಳಲ್ಲಿ ಎನ್​ಐಎ ದಾಳಿ

ಬಾಂಬ್ ಸ್ಫೋಟ ಸಂಭವಿಸಿ ಕೆಲವು ದಿನಗಳೇ ಕಳೆದರೂ ಶಂಕಿತನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಧ್ಯೆ, ಬಾಂಬ್ ಸ್ಫೋಟ ಹಾಗೂ ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಪ್ರತಿಪಕ್ಷ ಬಿಜೆಪಿ ನಿರಂತರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಟೀಕಾಪರಾರವನ್ನೇ ನಡೆಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಸ್ಪೋಟ ಪ್ರಕರಣದ ತನಿಖೆಯ ಅಖಾಡಕ್ಕೆ ಎನ್​ಐಎ ಧುಮುಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ