ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು

Updated on: Jul 16, 2026 | 10:49 AM

ಬೆಂಗಳೂರಿನ ನ್ಯೂ ಬ್ಲಾಸಮ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅರ್ಹನ್ ಪಾಷಾ ಜೂನ್ 10ರಂದು ತರಗತಿಯಲ್ಲಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಮಗುವಿನ ಕುಟುಂಬ ಆರೋಪಿಸಿದೆ. ಮಗು ಸುಸ್ತಾಗಿದೆ ಎಂದು ಹೇಳಿದರೂ ಚಿಕಿತ್ಸೆ ನೀಡಲು ವಿಳಂಬ ಮಾಡಲಾಗಿದೆ ಎನ್ನಲಾಗಿದೆ.

ಬೆಂಗಳೂರು, ಜುಲೈ 16: ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಜೂನ್ 10 ರಂದು ಐದನೇ ತರಗತಿಯ 12 ವರ್ಷದ ವಿದ್ಯಾರ್ಥಿ ಅರ್ಹನ್ ಪಾಷಾ ತರಗತಿ ಕೊಠಡಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ಬಾಲಕ ಕುಸಿದುಬೀಳುವ ಮೊದಲು ತನಗೆ ಸುಸ್ತಾಗಿದೆ ಎಂದು ಶಿಕ್ಷಕಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ, ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ಮಗುವಿನ ಸ್ಥಿತಿಯನ್ನು ಸೌಜನ್ಯಕ್ಕೂ ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತರಗತಿಗೆ ಬಂದು ಕುಳಿತ ಅರ್ಹನ್ ಪಾಷಾ ಬೆಂಚ್ ಮೇಲೆ ಕುಸಿದುಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು, ಶಾಲಾ ಸಿಬ್ಬಂದಿ 45 ನಿಮಿಷಗಳ ಕಾಲ ಬಾಲಕನ ಮೃತದೇಹವನ್ನು ಕೊಠಡಿಯಲ್ಲೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. 45 ನಿಮಿಷಗಳ ನಂತರ ಮಗುವಿನ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿತಿಯ ನಂತರ ಕುಟುಂಬಸ್ಥರು ತಕ್ಷಣ ಶಾಲೆಗೆ ಧಾವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗ ಶಿಕ್ಷಣಾಧಿಕಾರಿ ರಾಮಮೂರ್ತಿ ಪ್ರತಿಕ್ರಿಯಿಸಿದ್ದು, ‘ನಾನು ಈಗಾಗಲೆ ಎಲ್ಲಾ ಶಾಲೆ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೇನೆ. ಮಕ್ಕಳಿಗೆ ಆರೋಗ್ಯ ಸಮಸ್ಯೆಯಾದಾಗ ಪ್ರಥಮ ಚಿಕಿತ್ಸೆ ನೀಡಬೇಕು. ಮಕ್ಕಳು ಬೆಳಿಗ್ಗೆ ಬಂದು ಸಂಜೆ ಹೋಗುವವರೆಗೆ ಮಕ್ಕಳ ಜವಾಬ್ದಾರಿ ಶಾಲೆಯದ್ದಾಗಿರುತ್ತೆ. ಮಕ್ಕಳ ಆರೋಗ್ಯ ಕೆಟ್ಟಾಗ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು. ಪೋಷಕರು ಬರುವವರೆಗೂ ಆಡಳಿತ ಮಂಡಳಿ ಕಾಯಬಾರದು. ಈ‌ ಬಗ್ಗೆ ಎಲ್ಲಾ ಶಾಲೆಗಳಿಗೂ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ವರದಿ: ವಿಕಾಸ್, ಟಿವಿ9  ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us