Bengaluru Traffic: ಬೆಳ್ಳಂದೂರು, ಮಾರತ್ತಹಳ್ಳಿ ಸುತ್ತಮುತ್ತ ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಪ್ಲಾನ್!

Edited By:

Updated on: Sep 19, 2025 | 11:25 AM

ಬೆಂಗಳೂರು ಸಂಚಾರ ಸಲಹೆ: ಬೆಂಗಳೂರಿನ ಮಾರತಹಳ್ಳಿ ಮತ್ತು ಬೆಳ್ಳಂದೂರು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್‌ ನಿಭಾಯಿಸಲು, ಒಂದು ವಾರದ ಪ್ರಾಯೋಗಿಕ ಯೋಜನೆಯಡಿ ಮಾರ್ಗ ಬದಲಾವಣೆಯನ್ನು ಹೆಚ್ಎಎಲ್ ಸಂಚಾರ ಪೊಲೀಸರು ಜಾರಿಗೆ ತಂದಿದ್ದಾರೆ. ಕಲಾಮಂದಿರದಿಂದ ಕಾಡುಬೀಸನಹಳ್ಳಿಗೆ ಹೋಗುವ ವಾಹನಗಳಿಗೆ ರಿಂಗ್ ರಸ್ತೆಯಲ್ಲಿ ಸಂಚರಿಸಲು ನಿರ್ಬಂಧ ವಿಧಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 19: ಮಾರತ್ತಹಳ್ಳಿ, ಬೆಳ್ಳಂದೂರು ಸುತ್ತಮುತ್ತ ಟ್ರಾಫಿಕ್ ಹೆಚ್ಚಾದ ಕಾರಣ ಕಲಾಮಂದಿರ್​​ನಿಂದ ಕಾಡುಬೀಸನಹಳ್ಳಿ ತೆರಳುವ ಸವಾರರಿಗೆ ಹೆಚ್ಎಎಲ್ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಇಂದಿನಿಂದ ಒಂದು ವಾರ ಪ್ರಾಯೋಗಿಕವಾಗಿ ಸಂಚಾರ ನಿರ್ಬಂಧ ಇರಲಿದ್ದು, ಮಾರತ್ತಹಳ್ಳಿ‌, ಕಾಡುಬೀಸನಹಳ್ಳಿ ಸಂಚರಿಸುವವರಿಗೆ ಸರ್ವಿಸ್ ರಸ್ತೆಯಲ್ಲಿ ಹೋಗಲು ಮಾತ್ರ ಅವಕಾಶವಿದೆ. ರಿಂಗ್ ರಸ್ತೆಯಿಂದ ಸರ್ವಿಸ್ ರಸ್ತೆಗೆ ಎಡಕ್ಕೆ ತೆಗೆದುಕೊಳ್ಳುವ ಪಾಯಿಂಟ್ ಬಂದ್ ಮಾಡಲಾಗಿದೆ. ರಿಂಗ್ ರಸ್ತೆಯಲ್ಲಿ ನೇರ ಸಂಚಾರಕ್ಕೆ ಮಾತ್ರ ಅವಕಾಶ ಇದೆ.

ಪರ್ಯಾಯ ಮಾರ್ಗ ಯಾವುದು?

ಮಹದೇವಪುರ-ಕಾರ್ತಿಕ್‌ನಗರ ಕಡೆಯಿಂದ ಬರುವ ವಾಹನಗಳು ಕಲಾಮಂದಿರದ ಬಳಿ ಸರ್ವಿಸ್ ರಸ್ತೆಗೆ ತೆರಳಬೇಕು. ಮಾರತ್ ಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್‌ಪಾಸ್ ಬಳಿ ಯು-ಟರ್ನ್, ಮಾರತ್ ಹಳ್ಳಿ ಬ್ರಿಡ್ಜ್ ಬಳಿ ಎಡಕ್ಕೆ ತಿರುಗಬೇಕು. ಮುನ್ನೇಕೊಳಲು,ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಹೋಗಲು ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.

ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳಿಗೆ ಸರ್ವಿಸ್ ರಸ್ತೆ ನಿರ್ಬಂಧ ಹೇರಲಾಗಿದೆ. ಕಡ್ಡಾಯವಾಗಿ ಹೊರವರ್ತುಲ ರಸ್ತೆಯ ಮೂಲಕವೇ ಸಂಚರಿಸಲು ಸೂಚನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ