’10 ಸಾವಿರ ಕೊಡ್ತೀನಿ ಬರ್ತೀಯಾ?’: ರಾಮಮೂರ್ತಿ ನಗರದಲ್ಲಿ ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಕಾಮುಕನೊಬ್ಬ ನಿನ್ನ ರೇಟ್ ಎಷ್ಟು? ಹತ್ತು ಸಾವಿರ ಕೊಡುತ್ತೇನೆ ಬರುತ್ತೀಯಾ ಎಂದು ಕೇಳಿ ಕಿರುಕುಳ ನೀಡಿದ್ದಾನೆ. ಯುವತಿ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು, ಜುಲೈ 28: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸೋಮವಾರ ರಾತ್ರಿ ವೇಳೆ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ಯುವತಿಯ ಬಳಿ ಹೋಗಿ, ‘ನಿನ್ನ ರೇಟ್ ಎಷ್ಟು? ಹತ್ತು ಸಾವಿರ ಕೊಡುತ್ತೇನೆ, ಬರುತ್ತೀಯಾ?’ ಎಂದು ಪ್ರಶ್ನಿಸಿದ್ದಾನೆ. ಯುವತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ದೂರು ನೀಡುವುದಾಗಿ ಹೇಳಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ನಡೆದಿದ್ದೇನು?
ರಾತ್ರಿ ಸುಮಾರು 10:30ರ ವೇಳೆಗೆ ಯುವತಿ ರಸ್ತೆಬದಿಯಲ್ಲಿ ಕ್ಯಾಬ್‌ಗೆ ಕಾಯುತ್ತಿದ್ದಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ. ಆರೋಪಿಯು ತನ್ನ ದ್ವಿಚಕ್ರ ವಾಹನವನ್ನು ಆಕೆಯ ಬಳಿ ತಡೆದು ನಿಲ್ಲಿಸಿ, ಉದ್ಧಟತನದಿಂದ ಮಾತನಾಡಲು ಪ್ರಾರಂಭಿಸಿದ್ದಾನೆ. ಯುವತಿ ಧೈರ್ಯಗೆಡದೆ ತಕ್ಷಣವೇ ತನ್ನ ಮೊಬೈಲ್ ಫೋನ್ ತೆಗೆದು ಆತನ ಕೃತ್ಯವನ್ನು ವೀಡಿಯೋ ಮಾಡಲು ಮುಂದಾಗಿದ್ದಾಳೆ. ಇದನ್ನು ಕಂಡ ಆರೋಪಿಯು ಆಕೆಗೆ ಬೆದರಿಕೆ ಹಾಕಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಯುವತಿ ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ, ಆರೋಪಿಯ ವಾಹನ ಸಂಖ್ಯೆ ಮತ್ತು ಆತನ ಮುಖ ಸ್ಪಷ್ಟವಾಗಿ ಕಾಣಿಸುವ ವೀಡಿಯೋ ಸಾಕ್ಷ್ಯವನ್ನು ಹಂಚಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಆಗ್ರಹಿಸಿದ್ದಾರೆ.
ಆರೋಪಿ ಅರೆಸ್ಟ್
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಮಮೂರ್ತಿ ನಗರದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಸಿಟಿವಿ ದೃಶ್ಯಾವಳಿ ಹಾಗೂ ವಾಹನದ ನೋಂದಣಿ ಸಂಖ್ಯೆ ಆಧಾರದ ಮೇಲೆ ಆರೋಪಿಯ ಮೇಲೆ ಎಫ್ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

