“ಬೆಂಗಳೂರಿನ ರಸ್ತೆಗಳಿಗೆ ಡಾಂಬರ್ ಆಗಬೇಕಾದ್ರೆ ಮೋದಿಯವರೇ ಬರಬೇಕಾಯಿತು”: ಜಿಬಿಎ, ಬಿಎಂಆರ್‌ಸಿಎಲ್ ವಿರುದ್ಧ ಜನರ ಆಕ್ರೋಶ
ಬೆಂಗಳೂರು ರಸ್ತೆಗಳಲ್ಲಿನ ಗುಂಡಿಗಳ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೋದಿ ಸಂಚರಿಸಿದ ಮಾರ್ಗಗಳಿಗೆ ಮಾತ್ರ ತುರ್ತು ಡಾಂಬರೀಕರಣ ಮಾಡಲಾಗಿದ್ದು, ಉಳಿದ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಹುಳಿಮಾವು, ಕಾಳೇನ ಅಗ್ರಹಾರದಂತಹ ಪ್ರದೇಶಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ರಸ್ತೆಗಳಿಗೂ ಮೋದಿಯೇ ಬರಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು, ನ.15: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸಂಚರಿಸಿದ ಮಾರ್ಗಗಳಿಗೆ ಮಾತ್ರ ರಾತ್ರೋರಾತ್ರಿ ನುಣ್ಣಗೆ ಡಾಂಬರು ಹಾಕಿ, ಅದೇ ಮಾರ್ಗದ ಉಳಿದ ಭಾಗಗಳನ್ನು ಗುಂಡಿಮಯವಾಗಿ ಬಿಟ್ಟಿರುವ ಜಿಬಿಎ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳ ತಾರತಮ್ಯ ಧೋರಣೆಗೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆ (ನ.13) ಪ್ರಧಾನಿ ನರೇಂದ್ರ ಮೋದಿ ಅವರು ಡೈರಿ ಸರ್ಕಲ್ ಬಳಿಯ ಹೆಲಿಪ್ಯಾಡ್‌ನಿಂದ ಸುದ್ದುಗುಂಟೆ ಪಾಳ್ಯ ಮೆಟ್ರೋ ನಿಲ್ದಾಣದವರೆಗೆ ಕಾರಿನಲ್ಲಿ ಪ್ರಯಾಣಿಸಿದ್ದರು. ಬಳಿಕ ಐಐಎಂಬಿ ಕ್ಯಾಂಪಸ್‌ನಿಂದ ರಸ್ತೆ ಮಾರ್ಗವಾಗಿ ಮತ್ತೆ ಡೈರಿ ಸರ್ಕಲ್ ಹೆಲಿಪ್ಯಾಡ್‌ಗೆ ವಾಪಸ್ ಆಗಿದ್ದರು. ಮೋದಿ ಅವರು ಕಾರಿನಲ್ಲಿ ಸಂಚರಿಸಿದ ಈ ರಸ್ತೆಗಳಿಗೆ ಮಾತ್ರ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಹೊಸ ಡಾಂಬರು ಹಾಕಿ ಥಳಥಳಿಸುವಂತೆ ಮಾಡಿದ್ದಾರೆ. ಸುದ್ದುಗುಂಟೆ ಪಾಳ್ಯ ಮೆಟ್ರೋ ನಿಲ್ದಾಣದಿಂದ ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಪ್ರಧಾನಿ ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಡೈರಿ ಸರ್ಕಲ್‌ನಿಂದ ಐಐಎಂಬಿ ವರೆಗಿನ ನಾಲ್ಕು ಮೆಟ್ರೋ ನಿಲ್ದಾಣಗಳ ಕೆಳಗಿನ ರಸ್ತೆಗೆ ಕೇವಲ ಅರ್ಧಂಬರ್ಧ ಡಾಂಬರು ಹಾಕಿ ಕೈತೊಳೆದುಕೊಳ್ಳಲಾಗಿದೆ. ಉಳಿದ ಎರಡು ಮೆಟ್ರೋ ನಿಲ್ದಾಣಗಳು ಸೇರಿದಂತೆ ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಐಐಎಂಬಿ ಮೆಟ್ರೋ ನಿಲ್ದಾಣದವರೆಗಿನ ರಸ್ತೆಗೆ ಡಾಂಬರು ಹಾಕುವುದನ್ನೇ ಅಧಿಕಾರಿಗಳು ಸಂಪೂರ್ಣವಾಗಿ ಮರೆತಿದ್ದಾರೆ. ಪರಿಣಾಮ ಈ ಮಾರ್ಗದಲ್ಲಿ ನೂರಾರು ಗುಂಡಿಗಳು ಬಾಯ್ದೆರೆದಿದ್ದು, ನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. “ಉಳಿದ ಭಾಗಕ್ಕೂ ರಸ್ತೆ ಮಾಡಿಸಲು ಮತ್ತೆ ನರೇಂದ್ರ ಮೋದಿಯವರೇ ಬರಬೇಕಾ?” ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
