ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮುಖ್ಯಾಂಶಗಳು
- ಕಲಬುರಗಿಯಲ್ಲಿ ಬರಗಾಲದ ಛಾಯೆ
- ಭೀಮಾ ನದಿ ಬತ್ತಿಹೋಗಿ ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ಸ್ಥಿತಿ
- ಬೆಳೆ ನಷ್ಟದಿಂದ ರೈತರು ಕಂಗಾಲು
ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಜೀವನಾಡಿ ಭೀಮಾ ನದಿ ಮುಂಗಾರು ಮಳೆ ಇಲ್ಲದೆ ಸಂಪೂರ್ಣ ಬರಿದಾಗಿದೆ. ಕಳೆದ 20 ದಿನಗಳಿಂದ ಮಳೆ ಕೈಕೊಟ್ಟಿದ್ದು, ತೀವ್ರ ಬರಗಾಲದ ಛಾಯೆ ಆವರಿಸಿದೆ. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ.
ಕಲಬುರಗಿ, ಜೂನ್ 26: ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿ 20 ದಿನಗಳು ಕಳೆದರೂ ಕಲಬುರಗಿ ಜಿಲ್ಲೆಯಲ್ಲಿ ವರುಣ ಕೃಪೆ ತೋರಿಲ್ಲ. ಕಳೆದ 20 ದಿನಗಳಿಂದ ಒಂದೇ ಒಂದು ಹನಿ ಮಳೆ ಬರದ ಕಾರಣ, ಇಡೀ ಕಲಬುರಗಿ ಜಿಲ್ಲೆ ಭೀಕರ ಬರಗಾಲದ ಛಾಯೆಗೆ ಒಳಗಾಗಿದೆ. ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಜೀವನಾಡಿಯಾಗಿರುವ ಭೀಮಾ ನದಿ ಸಂಪೂರ್ಣವಾಗಿ ಬರಿದಾಗಿದೆ. ಕಳೆದ ವರ್ಷ ಇದೇ ಜೂನ್‌ನಲ್ಲಿ ಭೀಮಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿತ್ತು. ಆದರೆ ಈ ಬಾರಿ ನದಿ ಸಂಪೂರ್ಣ ಬಿಕೋ ಎನ್ನುತ್ತಿದೆ. ನದಿಯ ಒಡಲು ಬರಿದಾಗಿದ್ದು, ಅಲ್ಲಲ್ಲಿ ಸ್ವಲ್ಪ ನೀರಿದ್ದರೂ, ಇನ್ನೂ 15 ದಿನ ಮಳೆಯಾಗದಿದ್ದರೆ ಆ ನೀರು ಕೂಡ ಮಾಯವಾಗುವ ಪರಿಸ್ಥಿತಿ ಇದೆ.
ಸದ್ಯ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಇಡೀ ಜಿಲ್ಲೆಯಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಕಲಬುರಗಿ ನಗರ, ಅಫಜಲಪುರ ಪಟ್ಟಣ ಸೇರಿದಂತೆ ಸಾಕಷ್ಟು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಭೀಮಾ ನದಿ ಒಣಗಿರುವುದರಿಂದ ಲಕ್ಷಾಂತರ ರೈತರು ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಜಾನುವಾರುಗಳಿಗೆ ನೀರು ಕುಡಿಸಲು ಕಿಲೋಮೀಟರ್‌ಗಟ್ಟಲೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
