ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಒಲವು: ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ ಅಭಿಮಾನಿ

Edited By:

Updated on: Oct 12, 2026 | 11:53 AM

ಬೀದರ್‌ನಲ್ಲಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯ ಅಭಿಮಾನಿಯಾಗಿ, ದಂಪತಿಯೊಬ್ಬರು ತಮ್ಮ ನವಜಾತ ಗಂಡು ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಟ್ಟಿದ್ದಾರೆ. ಇದು ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿ ಹೇಗೆ ಅಚ್ಚಳಿಯದೆ ಉಳಿಯುತ್ತವೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಈ ವಿಶಿಷ್ಟ ನಾಮಕರಣವು ಜಿಲ್ಲಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ, ಸಿದ್ದರಾಮಯ್ಯರಿಗೆ ಅಪರೂಪದ ಗೌರವ ಸೂಚಿಸಿದೆ.

ಬೀದರ್ , ಅ.12: ರಾಜಕೀಯದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಜನನಾಯಕನೊಬ್ಬನ ಜನಪರ ಕಾರ್ಯಗಳು ಜನರ ಮನಸ್ಸಿನಲ್ಲಿ ಹೇಗೆ ಅಚ್ಚಳಿಯದೆ ಉಳಿಯುತ್ತವೆ ಎಂಬುದಕ್ಕೆ ಬೀದರ್ ಜಿಲ್ಲೆಯಲ್ಲಿ ಅಪರೂಪದ ನಿದರ್ಶನವೊಂದು ಬೆಳಕಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ಹಾಗೂ ಅವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆಯ ಮೇಲಿನ ಗೌರವದಿಂದ ದಂಪತಿಯೊಬ್ಬರು ತಮ್ಮ 15 ದಿನಗಳ ಹಸುಗೂಸಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಗುಲಗುಂಡಿ ಗ್ರಾಮದ ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ ನವಜಾತ ಶಿಶುವಿಗೆ ಇಂತಹ ವಿಭಿನ್ನ ಹಾಗೂ ಅರ್ಥಪೂರ್ಣ ಹೆಸರಿಟ್ಟು ವಿಶೇಷ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯು ರಾಜ್ಯದ ಲಕ್ಷಾಂತರ ಬಡ ಕುಟುಂಬಗಳ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಜನಪರ ಯೋಜನೆಯಿಂದ ತೀವ್ರವಾಗಿ ಪ್ರಭಾವಿತರಾದ ರಾಜಪ್ಪ ಮತ್ತು ಅಂಬಿಕಾ ದಂಪತಿ, ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಲು ನಿರ್ಧರಿಸಿದ್ದರು. ಅನ್ನಭಾಗ್ಯ ಯೋಜನೆಯ ಹೆಸರಿನ ‘ಅನ್ನ’ ಪದ ಹಾಗೂ ಸಿದ್ದರಾಮಯ್ಯ ಅವರ ಹೆಸರಿನ ‘ರಾಮಯ್ಯ’ ಪದವನ್ನು ಒಟ್ಟುಗೂಡಿಸಿ ತಮ್ಮ ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವೆಂದರೆ, ಮಗುವಿನ ಜನನಕ್ಕೂ ಮುನ್ನವೇ ದಂಪತಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಒಂದು ವೇಳೆ ಹೆಣ್ಣು ಮಗುವಾದರೆ ‘ಪಾರ್ವತಿರಾಮಯ್ಯ’ ಎಂದೂ, ಗಂಡು ಮಗುವಾದರೆ ‘ಅನ್ನರಾಮಯ್ಯ’ ಎಂದೂ ಹೆಸರಿಡಲು ಮುಂಚಿತವಾಗಿ ತೀರ್ಮಾನಿಸಿದ್ದು ವಿಶೇಷವಾಗಿತ್ತು. ಅದರಂತೆ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ತಮ್ಮ ಮೊದಲಿನ ನಿರ್ಧಾರದಂತೆಯೇ ನಾಮಕರಣ ನೆರವೇರಿಸಿದ್ದಾರೆ. ಬಡವರ ಹಸಿವು ನೀಗಿಸಿದ ಮಹಾನ್ ನಾಯಕನ ಹೆಸರನ್ನು ತಮ್ಮ ಮುದ್ದು ಕಂದನಿಗೆ ಇಡುವ ಮೂಲಕ ಈ ದಂಪತಿ ನಾಡಿನಲ್ಲಿ ರಾಜಕೀಯ ನಾಯಕನೊಬ್ಬನಿಗೆ ಸಿಕ್ಕ ಅಪರೂಪದ ಅಭಿಮಾನದ ಸಂಕೇತವಾಗಿದ್ದಾರೆ. ಸದ್ಯ ದುಗುಲಗುಂಡಿ ಗ್ರಾಮದ ರಾಜಪ್ಪ-ಅಂಬಿಕಾ ದಂಪತಿಯ ಈ ವಿಭಿನ್ನ ನಾಮಕರಣದ ವಿಚಾರ ಈಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More