ವನ್ಯ ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ‘ಸೀರೆ’ ಐಡಿಯಾ! ಬೀದರ್ ರೈತರ ವಿನೂತನ ಯತ್ನಕ್ಕೆ ಸಿಕ್ಕಿದೆ ಯಶಸ್ಸು
ಬೀದರ್ ರೈತರು ವನ್ಯಜೀವಿಗಳಿಂದ ಬೆಳೆ ರಕ್ಷಿಸಲು ವಿಭಿನ್ನ ಐಡಿಯಾ ಕಂಡುಕೊಂಡಿದ್ದಾರೆ. ರಾತ್ರಿ ವೇಳೆ ಜಿಂಕೆ, ಮೊಲ, ಕಾಡುಹಂದಿಗಳು ಬೆಳೆ ನಾಶಪಡಿಸುವುದನ್ನು ತಡೆಯಲು, ಹೊಲದ ಅಂಚಿನಲ್ಲಿ ಹಳೆಯ ಸೀರೆಗಳನ್ನು ಕಟ್ಟುತ್ತಿದ್ದಾರೆ. ಗಾಳಿಗೆ ಹಾರಾಡುವ ಈ ಸೀರೆಗಳು ಪ್ರಾಣಿಗಳನ್ನು ಹೆದರಿಸಿ ಬೆಳೆ ರಕ್ಷಿಸುತ್ತಿವೆ. ಇದು ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನವಾಗಿದೆ.
ಬೀದರ್, ಡಿಸೆಂಬರ್ 8: ಕಾಡು ಪ್ರಾಣಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ಬೀದರ್ ರೈತರು ವಿನೂತನ ವಿಧಾನವೊಂದನ್ನು ಅಳವಡಿಸಿಕೊಂಡಿದ್ದಾರೆ. ಹಳೆಯ ಸೀರೆಗಳನ್ನು ಬಳಸಿ ಜಿಂಕೆ, ಮೊಲ ಮತ್ತು ಕಾಡುಹಂದಿಗಳಿಂದ ಬೆಳೆಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಚಳಿಗಾಲದಲ್ಲಿ ರಾತ್ರಿ ಹೊತ್ತು ಹೊಲಗಳಿಗೆ ನುಗ್ಗಿ ಕಡಲೆ, ಕುಸುಬಿ, ಜೊಳದಂತಹ ಬೆಳೆಗಳನ್ನು ಹಾಳು ಮಾಡುತ್ತಿದ್ದ ಪ್ರಾಣಿಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ಇದನ್ನು ತಪ್ಪಿಸಲು, ಸೀರೆಗಳನ್ನು ಹೊಲದ ಅಂಚು ಮತ್ತು ಬೆಳೆಗಳ ಸುತ್ತಲೂ ಕಟ್ಟುತ್ತಾರೆ. ಇದರಿಂದ ಪ್ರಾಣಿಗಳು ಹೊಲದ ಹತ್ತಿರ ಬರುವುದಿಲ್ಲ. ಗಾಳಿಗೆ ಸೀರೆಗಳು ಹಾರಾಡುವುದರಿಂದ ಮತ್ತು ಗೋಡೆಗಳಂತೆ ಕಾಣುವುದರಿಂದ ಕಾಡು ಪ್ರಾಣಿಗಳು ಹೆದರಿ ದೂರ ಉಳಿಯುತ್ತವೆ. ಈ ಹಿಂದೆ ರೈತರು ಬೆದರು ಬೊಂಬೆಗಳನ್ನು ಬಳಸುತ್ತಿದ್ದರೂ, ಅವು ಪ್ರಾಣಿಗಳಿಗೆ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಸುಮಾರು 100 ರೂಪಾಯಿಗಳಲ್ಲಿ ದೊರೆಯುವ ಸೀರೆಗಳು ರೈತರಿಗೆ ಕಡಿಮೆ ವೆಚ್ಚದಲ್ಲಿ ಪರಿಹಾರ ನೀಡಿವೆ. ಇದರಿಂದ ರೈತರಿಗೆ ರಾತ್ರಿ ಹೊತ್ತು ಪ್ರಾಣಿಗಳನ್ನು ಕಾಯುವ ಶ್ರಮವೂ ತಪ್ಪಿದೆ.
