ಬಿಜೆಪಿ ಸರ್ಕಾರ ಕೇವಲ ರಾಜಕೀಯ ಲಾಭಕ್ಕಾಗಿ ಹಿಜಾಬ್ ವಿವಾದವನ್ನು ಬೃಹದಾಕಾರವಾಗಿ ಬೆಳೆಯಲು ಬಿಟ್ಟಿದೆ: ಜಮೀರ್ ಅಹ್ಮದ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2022 | 8:20 PM

ಈ ವಿವಾದ ಬಿಜೆಪಿಗೆ ನೆರವಾಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ, ನಿಸ್ಸಂದೇಹವಾಗಿ ಸಹಾಯವಾಗಲಿದೆ ಎಂದು ಉತ್ತರಿಸಿದ ಜಮೀರ್ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ವಿವಾದ ಬೃಹದಾಕಾರವಾಗಿ ಬೆಳೆಯಲು ಬಿಡಲಾಗಿದೆ ಎಂದರು.

ನಮ್ಮ ದೇಶದಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಷಯಗಳು ಬಹಳ ಬೇಗ ವಿವಾದದ ರೂಪ ತಳೆದುಬಿಡುತ್ತವೆ. ಉಡುಪಿಯ ಸರ್ಕಾರಿ ಪಿಯು ಕಾಲೇಜೊಂದರಲ್ಲಿ (Udupi PU College) ಮುಸ್ಲಿಂ ಸಮುದಾಯಕ್ಕೆ (Muslim community) ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣವೊಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ಅವಶ್ಯಕತೆಯಿತ್ತಾ ಅನ್ನೋದು ಪ್ರಜ್ಞಾವಂತರು ತಮ್ಮನ್ನು ತಾವು ಕೇಳಿಕೊಳ್ಳಬೇಕಿದೆ. ಸಮಸ್ಯೆ ಏನೆಂದರೆ ಈ ವಿವಾದ ಬೇರೆ ಕರಾವಳಿಯ ಬೇರೆ ಊರುಗಳಿಗೆ ಮತ್ತು ಬೇರೆ ಜಿಲ್ಲೆಗಳಿಗೂ ಹಬ್ಬುತ್ತಿದೆ. ಕುಂದಾಪುರದ (Kundapura) ಕಾಲೇಜೊಂದರ ಹಿಂದೂ ವಿದ್ಯಾರ್ಥಿಗಳು (Hindu students) ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ ತಮಗೂ ಕೇಸರಿ ಶಾಲೆ ಹೊದ್ದು ಬರಲು ಅನುಮತಿ ನೀಡಬೇಕೆಂದು ಆಗ್ರಹಿಸುವುದಲ್ಲದೆ ಕೆಲವರು ಅವುಗಳನ್ನು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಹಿಜಾಬ್-ಕೇಸರಿ ಶಾಲು ವಿವಾದ ಸದ್ದು ಮಾಡುತ್ತಿದೆ. ಪ್ರಕರಣ ಈಗ ಕೋರ್ಟಿನ ಮೆಟ್ಟಿಲೇರಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ವರದಿಗಾರ ಪ್ರಮೋದ್ ಶಾಸ್ತ್ರಿ ಶುಕ್ರವಾರ ಬೆಂಗಳೂರಲ್ಲಿ ಕಾಂಗ್ರೆಸ್ ನಾಯಕ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಮಾತಾಡಿಸಿದರು. ಪ್ರಕರಣ ವಿವಾದವಾಗಿ ಮಾರ್ಪಟ್ಟಿರುವುದಕ್ಕೆ ನೇರವಾಗಿ ಸರ್ಕಾರ ಮತ್ತು ಬಿಜೆಪಿಯನ್ನು ದೂಷಿಸಿದ ಜಮೀರ್ ಈ ವಿವಾದ ಕೊನೆಗೊಳ್ಳುವುದು ಸರ್ಕಾರಕ್ಕೆ ಇಷ್ಟವಿಲ್ಲ, ಇದನ್ನು ಎಲ್ಲಾ ಕಡೆ ಹಬ್ಬುವಂತೆ ಮಾಡಲಾಗುತ್ತಿದೆ. ಯಾಕೆಂದರೆ ಇನ್ನೊಂದು ವರ್ಷ ಕಳೆದರೆ ರಾಜ್ಯದಲ್ಲಿ ವಿಧಾನ ಸಬೆ ಚುನಾವಣೆ ನಡೆಯಲಿದ್ದು ಅಭಿವೃದ್ದಿ ಕಾರ್ಯಗಳ ಆಧಾರದಲ್ಲಿ ಮತ ಕೇಳಲು ಮುಖವಿಲ್ಲದ ಬಿಜೆಪಿ ಇಂಥ ವಿವಾದಗಳನ್ನು ಸೃಷ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ ಎಂದು ಹೇಳಿದರು.

ಈ ವಿವಾದ ಬಿಜೆಪಿಗೆ ನೆರವಾಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ, ನಿಸ್ಸಂದೇಹವಾಗಿ ಸಹಾಯವಾಗಲಿದೆ ಎಂದು ಉತ್ತರಿಸಿದ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ವಿವಾದ ಬೃಹದಾಕಾರವಾಗಿ ಬೆಳೆಯಲು ಬಿಡಲಾಗಿದೆ ಎಂದರು.

ಇದನ್ನೂ ಓದಿ:   ಉಡುಪಿಯಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಬಂದಿದ್ದ ಸ್ಟೂಡೆಂಟ್ಸ್​ಗೆ ನೋ ಎಂಟ್ರಿ