ಮತ್ತೊಮ್ಮೆ ಮಾಜಿ ಸಿಎಮ್ ಬಿ ಎಸ್ ವೈ ಮತ್ತು ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು ಬಸನಗೌಡ ಯತ್ನಾಳ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 19, 2022 | 4:22 PM

ಆರಗ ಜ್ಞಾನೇಂದ್ರ ಗೃಹಖಾತೆಯನ್ನು ನಿಭಾಯಿಸಲು ಶಕ್ತರಲ್ಲ ಮತ್ತು ಯೋಗ್ಯರೂ ಅಲ್ಲ. ಅವರೇ ಮುಖ್ಯಮಂತ್ರಿಗಳೊಂದಿಗೆ ಮಾತಾಡಿ ನನ್ನಿಂದ ಇದನ್ನು ನಿಭಾಯಿಸುವುದಯ ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಆಚೆ ಬರಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಪಕ್ಷದವರ ವಿರುದ್ಧ ಬೆಂಕಿಯುಗಳುವುದನ್ನು ಮುಂದುವರಿಸಿದ್ದಾರೆ. ವಿಜಯಪುರನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು ಪಿ ಎಸ್ ಐ ಹುದ್ದೆಗಳ ನೇಮಕಾತಿಯಲ್ಲಿ (PSI Recruitment) ನಡೆದಿರುವ ಅಕ್ರಮದಲ್ಲಿ ಯಾವುದೇ ಪಕ್ಷದ ನಾಯಕನಾಗಿರಲಿ ಕ್ರಮ ಜರುಗಿಸಬೇಕು ಅಂತ ಹೇಳಿದರು. ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಲಾಗಿದೆ ಮತ್ತು ಅಧಿಕಾರಗಳ ಒಂದು ತಂಡ ಹಗರಣದ ಕೇಂದ್ರ ಬಿಂದು ಎನಿಸಿಕೊಂಡಿರುವ ಕಲಬುರಗಿಯಲ್ಲಿ (Kalaburgi) ಕ್ಯಾಂಪ್ ಹೂಡಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ 8 ಆರೋಪಿಗಳನ್ನು ಬಂಧಿಸಲಾಗಿದೆ. ಸದರಿ ಪ್ರಕರಣದಲ್ಲಿ ದಿವ್ಯಾ ಹಾಗರಗಿ (Divya Hagaragi) ಎನ್ನುವ ಮಹಿಳೆಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ದಿವ್ಯಾ ಕಲಬುರಗಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಾರೆ ಮತ್ತು ಪಿಎಸ್ಐ ಲಿಖಿತ ಪರೀಕ್ಷೆಗಳಿಗೆ ಅವರು ನಡೆಸುವ ಆಂಗ್ಲ ಮಾಧ್ಯಮ ಶಾಲೆ ಒಂದು ಕೇಂದ್ರವಾಗಿತ್ತು.

ಈ ಹಿನ್ನೆಲೆಯಲ್ಲಿ ದಿವ್ಯಾ ಅವರ ಪತಿ ರಾಜೇಶ ಹಂಗರಗಿ ಅವರನ್ನು ಬಂಧಿಸಲಾಗಿದೆ ಮತ್ತು ಖುದ್ದು ದಿವ್ಯಾ ನಾಪತ್ತೆಯಾಗಿದ್ದಾರೆ. ಯತ್ನಾಳ್ ಅವರು ದಿವ್ಯಾ ಹಾಗರಗಿ ಹಿಂದೆ ಒಂದು ದೊಡ್ಡ ಶಕ್ತಿ ಎಂದು ಹೇಳುತ್ತಾ ಅದು ನಿಕಟಪೂರ್ವ ಮುಖ್ಯಮಂತ್ರಿ ಎನ್ನುತ್ತಾ ಬಿಎಸ್ ಯಡಿಯೂರಪ್ಪನವರ ಹೆಸರನ್ನು ಸೂಚ್ಯವಾಗಿ ಹೇಳುತ್ತಾರೆ. ಇದು ಬಹಳ ದಿನಗಳಿಂದ ನಡೆಯುತಿತ್ತು ಮತ್ತು ಇವರಿಂದಾಗಿ ನಮ್ಮ ಸರ್ಕಾರದ ಹೆಸರು ಹಾಳಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ ಗಲಭೆ ವಿಷಯವಾಗಿಯೂ ಮಾತಾಡಿದ ಶಾಸಕರು, ಸರ್ಕಾರ ಪ್ರಕರಣದ ಆಳದವರೆಗೆ ಹೋಗಬೇಕು, ಅದು ಬಿಸಿಯಾಗಿರುವಾಗ ಮಾತ್ರ ತನಿಖೆ, ಶಿಕ್ಷೆ ಅಂತೆಲ್ಲ್ಲ ಮಾತಾಡಿ ನಂತರ ಸುಮ್ಮನಾಗಬಾರದು. ಹುಬ್ಬಳ್ಳಿ ಪ್ರಕರಣ ತಲೆದೋರುವ ಮೊದಲು ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಪ್ರಕರಣದ ಬಗ್ಗೆ ಮಾತಾಡಲಾಗುತಿತ್ತು. ಈಗ ಹುಬ್ಬಳ್ಳಿ ಪ್ರಕರಣದಲ್ಲಿ ಅದು ಮುಚ್ಚಿಹೋದಂತಾಗಿದೆ, ಆದರೆ ಹಾಗಾಗಬಾರದು. ಆ ಪ್ರಕರಣವೇ ಬೇರೆ ಮತ್ತು ಹುಬ್ಬಳ್ಳಿ ಪ್ರಕರಣವೇ ಬೇರೆ. ಹುಬ್ಬಳ್ಳಿ ಪ್ರಕರಣ ನಮ್ಮ ರಾಜ್ಯದ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಯತ್ನಾಳ್ ಹೇಳಿದರು.

ನಂತರ ಯತ್ನಾಳ್ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಅವರು ಗೃಹಖಾತೆಯನ್ನು ನಿಭಾಯಿಸಲು ಶಕ್ತರಲ್ಲ ಮತ್ತು ಯೋಗ್ಯರೂ ಅಲ್ಲ. ಅವರೇ ಮುಖ್ಯಮಂತ್ರಿಗಳೊಂದಿಗೆ ಮಾತಾಡಿ ನನ್ನಿಂದ ಇದನ್ನು ನಿಭಾಯಿಸುವುದಯ ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಆಚೆ ಬರಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇದನ್ನೂ ಓದಿ:  ಮುಗ್ಧ ಹಿಂದೂಗಳು ಸಾಯುತ್ತಿದ್ದರೆ ಮುಸಲ್ಮಾನರ ಮನೇಲಿ ಬಿರಿಯಾನಿ ತಿನ್ನುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ: ಬಸನಗೌಡ ಯತ್ನಾಳ್