ಕೆಪಿಎಸ್​ಸಿ ಕಮೀಶನರು ಬಿಜೆಪಿ ಶಾಸಕ ಸುರೇಶ ಕುಮಾರ್ ಅವರನ್ನು ಕಚೇರಿ ಒಳಗೆ ಬರಲು ಬಿಡಲಿಲ್ಲ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 31, 2022 | 7:38 PM

ಸುರೇಶ ಅವರನ್ನು ಒಳಗೂ ಬಿಟ್ಟುಕೊಳ್ಳದೆ, ಮೇನ್ ಗೇಟ್​ನಲ್ಲೇ ನಿಲ್ಲಿಸಿ ತಮ್ಮ ಕಚೇರಿಯ ಕೆಳಸ್ತರದ ಅಧಿಕಾರಿಗಳನ್ನು ಕಳಿಸಿ ಮನವಿಯಲ್ಲಿ ಏನಿದೆ ಫೋನಲ್ಲಿ ಅಧಿಕಾರಿಯಿಂದ ಕೇಳಿಸಿಕೊಳ್ಳುವ ‘ಸರಳತೆ’ ಮತ್ತು ‘ಸೌಜನ್ಯತೆ’ಯನ್ನು ಸತ್ಯವತಿ ಮೇಡಂ ಪ್ರದರ್ಶಿಸಿದ್ದಾರೆ.

Bengaluru: ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಪ್ರಾಮಾಣಿಕರಿಗೆ, ಭ್ರಷ್ಟಾಚಾರಿಗಳಲ್ಲದವರಿಗೆ ಬೆಲೆ ಸಿಗಲಾರದು. ಇದು ಸರ್ವಕಾಲಿಕ ಸತ್ಯ! ಬಿಜೆಪಿ ಶಾಸಕ (BJP MLA) ಮತ್ತು ಮಾಜಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ ಕುಮಾರ (S Suresh Kumar) ಅವರು ಶುದ್ಧಹಸ್ತರಾಗಿದ್ದರು ಅನ್ನೋದು ಕನ್ನಡಿಗರಿಗೆಲ್ಲ ಗೊತ್ತಿದೆ. ಅವರನ್ನು ಸಚಿವ ಸ್ಥಾನದಿಂದ ಯಾಕೆ ಸರಿಸಲಾಯಿತು ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ. ಆದರೆ ಅದು ಸುರೇಶ ಅವರಿಗೆ ಗೊತ್ತಿದೆ, ಹಾಗಂತ ಅವರು ಅದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡು ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡಿಲ್ಲ. ಅದು ಅವರ ದೊಡ್ಡಸ್ತಿಕೆ. ಫೆಬ್ರವರಿ 2021 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಪರ ಹೋರಾಡುತ್ತಿರುವ ಸುರೇಶ ಮಂಗಳವಾರ ಸುದ್ದಿಯಲ್ಲಿದ್ದರು.

ಅಭ್ಯರ್ಥಿಗಳು ಎತ್ತಿರುವ ಕೆಲವು ಗೊಂದಲಗಳಿಗೆ ಸಮಾಧಾನ ಪಡೆದುಕೊಳ್ಳಲು ಸುರೇಶ ಅವರು ಮಂಗಳವಾರ ಬೆಳಗ್ಗೆ ಕೆಪಿಎಸ್ ಸಿ ಕಚೇರಿಗೆ ಮನವಿಪತ್ರದೊಂದಿಗೆ ಬಂದಿದ್ದರು. ಈ ಆಯೋಗಕ್ಕೆ ಐಎಎಸ್ ಅಧಿಕಾರಿಣಿ ಜಿ ಸತ್ಯವತಿ ಕಮೀಶನರ್ ಅಗಿದ್ದಾರೆ. ಸುರೇಶ ಕುಮಾರ ಅವರು ಆಡಳಿತ ಪಕ್ಷದ ಶಾಸಕರಾಗಿರುವುದರಿಂದ ಅವರನ್ನು ಕಚೇರಿಯಲ್ಲಿ ತಮ್ಮ ಚೇಂಬರ್ ಗೆ ಕರೆಸಿಕೊಂಡು ಮನವಿ ಪತ್ರ ಸ್ವೀಕರಿಸುವ ಕೆಲಸ ಸತ್ಯವತಿ ಮೇಡಂ ಮಾಡಬೇಕಿತ್ತು.

ಅದರೆ ಅವರು ಹಾಗೆ ಮಾಡಿಲ್ಲ. ಸುರೇಶ ಅವರನ್ನು ಒಳಗೂ ಬಿಟ್ಟುಕೊಳ್ಳದೆ, ಮೇನ್ ಗೇಟ್​ನಲ್ಲೇ ನಿಲ್ಲಿಸಿ ತಮ್ಮ ಕಚೇರಿಯ ಕೆಳಸ್ತರದ ಅಧಿಕಾರಿಗಳನ್ನು ಕಳಿಸಿ ಮನವಿಯಲ್ಲಿ ಏನಿದೆ ಫೋನಲ್ಲಿ ಅಧಿಕಾರಿಯಿಂದ ಕೇಳಿಸಿಕೊಳ್ಳುವ ‘ಸರಳತೆ’ ಮತ್ತು ‘ಸೌಜನ್ಯತೆ’ಯನ್ನು ಸತ್ಯವತಿ ಮೇಡಂ ಪ್ರದರ್ಶಿಸಿದ್ದಾರೆ.

ಸುರೇಶ್ ಅವರ ಹೃದಯವಂತಿಕೆ, ಔದಾರ್ಯವನ್ನು ಗಮನಿಸಿ ಮಾರಾಯ್ರೇ. ಒಬ್ಬ ಶಾಸಕನಾಗಿ ತಾವು ಗೇಟಿನ ಬಳಿಯೇ ನಿಲ್ಲುವಂತಾದರೂ ಅವರಿಂದ ಕಮೀಶನರ್ ಮತ್ತು ಕೆಪಿಎಸ್ ಸಿ ವಿರುದ್ಧ ಟೀಕೆ ಬರುವುದಿಲ್ಲ. ದೊಡ್ಡವರಿಂದಲೇ ದೊಡ್ಡಸ್ತನ ನಿರೀಕ್ಷಿಸಬಹುದು ಅನ್ನೋದಕ್ಕೆ ಇದೊಂದು ನಿದರ್ಶನ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.