ರಾಜ್ಯ ಬಿಜೆಪಿ ಘಟಕದಲ್ಲಿ ನಾಚಿಕೆ, ಮಾನ-ಮರ್ಯಾದೆ ಇಲ್ಲದ ಒಕ್ಕಲಿಗ ನಾಯಕರಿದ್ದಾರೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಎಲ್ಲಾದಕ್ಕೂ ಕ್ರಮ ತೆಗೆದುಕೊಳ್ತೀನಿ ಅಂತ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಕ್ರಿಯತೆಯ ಪ್ರತೀಕವಾಗಿದ್ದಾರೆ. ರಾಜ್ಯ ಎಕ್ಕುಟ್ಟಿ ಹೋದರೇನು? ಸಿಎಮ್ ಆಗಿರುವಷ್ಟು ದಿನ ಹಾಯಾಗಿರ್ತೀನಿ ಅನ್ನೋ ಧೋರಣೆ ಅವರದ್ದು. ಈ ಸರ್ಕಾರದಲ್ಲಿ ಮಾನ ಮರ್ಯಾದೆ ಇರೋರು ಯಾರೂ ಇಲ್ಲ ಅಂತ ಲಕ್ಷ್ಮಣ್ ಹೇಳಿದರು.

ರಾಜ್ಯ ಬಿಜೆಪಿ ಘಟಕದಲ್ಲಿ ನಾಚಿಕೆ, ಮಾನ-ಮರ್ಯಾದೆ ಇಲ್ಲದ ಒಕ್ಕಲಿಗ ನಾಯಕರಿದ್ದಾರೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 01, 2022 | 5:27 PM

Mysuru: ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ (M Lakshman) ರಾಜ್ಯ ಬಿಜೆಪಿ ಘಟಕದ ಒಕ್ಕಲಿಗ (Vokkaliga) ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಷ್ಟ್ರಕವಿ ಕುವೆಂಪು (Kuvempu) ಅವರನ್ನು ಪಠ್ಯಪುಸ್ತಕ ಪರಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohit Chakrateertha) ಅವಮಾನಿಸಿದರೂ ಅವರ ಸಮುದಾಯದ ನಾಯಕರಾಗಿರುವ ಆರ್ ಅಶೋಕ, ಸದಾನಂದ ಗೌಡ, ಸಿಟಿ ರವಿ, ಕೆ ಗೋಪಾಲಯ್ಯ ಮೊದಲಾದವರೆಲ್ಲ ತೆಪ್ಪಗಿರೋದು ನೋಡಿದರೆ ಅವರಲ್ಲಿ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲ ಅನಿಸುತ್ತೆ ಎಂದು ಲಕ್ಷ್ಮಣ್ ಹೇಳಿದರು. ಹಾಗೆ ನೋಡಿದರೆ ರಾಜ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು ಒಂದು ಸಮುದಾಯಕ್ಕೆ ಸೇರಿದ ಕವಿ ಆಗಿರಲಿಲ್ಲ. ಆದರೆ, ತಮ್ಮ ಜಾತಿಯ ಕವಿಗೆ ಅವಮಾನ ಆಗುತ್ತಿದ್ದರೂ ಈ ನಾಯಕರು ಚಕಾರವೆತ್ತದಿರೋದು ರೋಹಿತ್ ಚಕ್ರತೀರ್ಥನನ್ನೇ ಇವರು ತಮ್ಮ ಚಕ್ರವರ್ತಿಯನ್ನಾಗಿ ಮಾಡಿಕೊಂಡಂತಿದೆ ಎಂದು ಹೇಳಿದರು.

ಆದಿ ಚುಂಚನಗಿರಿ ಸ್ವಾಮೀಜಿಯವರಿಗೂ ಮನವಿ ಮಾಡಿಕೊಳ್ಳುತ್ತಾ ಲಕ್ಷ್ಮಣ್ ಅವರು ಮುಖ್ಯಮಂತ್ರಿಗಳಿಗೆ ಬರೆದು ಸುಮ್ಮನಾಗಬಾರದು, ಯಾಕೆಂದರೆ ಬಿಜೆಪಿ ನಾಯಕರು ಈಗ ಎಲ್ಲ್ಲರನ್ನೂ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ. ಮೊದಲು ಮುಸ್ಲಿಮರು, ಈಗ ಶೂದ್ರರು ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳನ್ನು ಆರಿಸಿಕೊಂಡಿದ್ದಾರೆ. ಮೊದಲು ತಡವಿ ನೋಡುತ್ತಾರೆ, ತಡವಿಸಿಕೊಂಡವರಿಂದ ಪ್ರತಿರೋಧ ಎದುರಾಗದೆ ಹೋದರೆ ಅವರ ಮೇಲೆ ಆಕ್ರಮಣ ಮಾಡುತ್ತಾ ಹೋಗುತ್ತಾರೆ ಎಂದು ಲಕ್ಷ್ಮಣ್ ಹೇಳಿದರು.

ಎಲ್ಲಾದಕ್ಕೂ ಕ್ರಮ ತೆಗೆದುಕೊಳ್ತೀನಿ ಅಂತ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಕ್ರಿಯತೆಯ ಪ್ರತೀಕವಾಗಿದ್ದಾರೆ. ರಾಜ್ಯ ಎಕ್ಕುಟ್ಟಿ ಹೋದರೇನು? ಸಿಎಮ್ ಆಗಿರುವಷ್ಟು ದಿನ ಹಾಯಾಗಿರ್ತೀನಿ ಅನ್ನೋ ಧೋರಣೆ ಅವರದ್ದು. ಈ ಸರ್ಕಾರದಲ್ಲಿ ಮಾನ ಮರ್ಯಾದೆ ಇರೋರು ಯಾರೂ ಇಲ್ಲ ಅಂತ ಲಕ್ಷ್ಮಣ್ ಹೇಳಿದರು.

ಮೊನ್ನೆ ಬೆಂಗಳೂರಲ್ಲಿ ರಾಷ್ಟ್ರದ ಗೌರವಾನ್ವಿತ ರೈತನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದ ಹಲ್ಲೆ ಬಿಜೆಪಿ ಪ್ರಾಯೋಜಿತವಾಗಿತ್ತು. ಅವರ ಮುಖಕ್ಕೆ ಮಸಿ ಬಳಿದ ಭರತ್ ಶೆಟ್ಟಿ ರಾಜ್ಯದ ಹಲವಾರು ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾನೆ ಎಂದು ಹೇಳಿದ ಲಕ್ಷ್ಮಣ್ ಅವರು ಕೆಲವು ಫೋಟೋಗಳನ್ನು ಮಾಧ್ಯಮದವರಿಗೆ ತೋರಿಸಿದರು.

ಹಾಗೆಯೇ, ಪ್ರಮೋದ್ ಮುತಾಲಿಕ್ ನಮ್ಮ ರಾಜ್ಯದ ಅಘೋಷಿತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:26 pm, Wed, 1 June 22

Follow us