2023 ರ ವಿಧಾನ ಸಭಾ ಚುನಾವಣೆವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ: ಪ್ರಲ್ಹಾದ್ ಜೋಶಿ

ಮುಂದಿನ ಅಂದರೆ 2023 ರ ವಿಧಾನ ಸಭಾ ಚುನಾವಣೆಯವರೆಗೆ ಬಸವಾರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಅದರ ಬಗ್ಗೆ ಯಾರಿಗೂ ಅನುಮಾನ ಬೇಡ ಅಂದರು. ಇಂಥ ಸುದ್ದಿಗಳು ಹೇಗೆ ಹುಟ್ಟುತ್ತವೆಯೋ ಗೊತ್ತಾಗುವುದಿಲ್ಲ, ಯಾರೋ ಪ್ಲ್ಯಾನ್ ಮಾಡಿಸಿ ಇವನ್ನು ಹಬ್ಬಿಸುತ್ತಾರೆ ಅನಿಸುತ್ತದೆ ಎಂದು ಅವರು ಹೇಳಿದರು.

Arun Belly

|

May 07, 2022 | 10:40 PM

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿ ಸುಖಾಸುಮ್ಮನೆ ಹಬ್ಬಿರುವಂಥದ್ದು, ಗಾಳಿ ಸುದ್ದಿಗಳನ್ನು ನಂಬಿ ಅವುಗಳ ಬಗ್ಗೆ ಬರೆದು ನಿಮ್ಮ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಶನಿವಾರ ಹುಬ್ಬಳ್ಳಿಯ ವಿಮಾನ ನಿಲ್ಧಾಣದಲ್ಲಿ (Hubballi airport) ಮಾಧ್ಯಮದವರಿಗೆ ಹೇಳಿದರು. ಸಂಪುಟ ವಿಸ್ತರಣೆ (cabinet expansion) ಬಗ್ಗೆ ಮಾತಾಡಿದ ಅವರು ಅದು ಯಾವಾಗ ನಡೆಯುತ್ತದೆ ಅಂತ ಹೇಳಲಿಲ್ಲವಾದರೂ ಮುಖ್ಯಮಂತ್ರಿಗಳು, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೊನ್ನೆಯಷ್ಟೇ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿನ ವಿದ್ಯಮಾನಗಳ ಕುರಿತು ಮಾಹಿತಿ ಸಂಗ್ರಹಿಸಿರುವ ಅಮಿತ್ ಶಾ ನಡುವೆ ಒಂದು ಚರ್ಚೆ ನಡೆದ ಬಳಿಕ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಅನ್ನೋದು ಗೊತ್ತಾಗುತ್ತದೆ ಎಂದು ಜೋಶಿ ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗುತ್ತದೆಯೇ ಅಂತ ಕೇಳಿದಾಗ ಅವರು ಮುಗುಳುನಗುತ್ತಾ ಅಂಥದ್ದೇನೂ ಇಲ್ಲ, ಒಂದು ಮಾತನ್ನು ನಿಮಗೆಲ್ಲ ಸ್ಪಷ್ಟವಾಗಿ ಹೇಳ್ತೀನಿ ಕೇಳ್ರೀ, ಮುಂದಿನ ಅಂದರೆ 2023 ರ ವಿಧಾನ ಸಭಾ ಚುನಾವಣೆಯವರೆಗೆ ಬಸವಾರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಅದರ ಬಗ್ಗೆ ಯಾರಿಗೂ ಅನುಮಾನ ಬೇಡ ಅಂದರು. ಇಂಥ ಸುದ್ದಿಗಳು ಹೇಗೆ ಹುಟ್ಟುತ್ತವೆಯೋ ಗೊತ್ತಾಗುವುದಿಲ್ಲ, ಯಾರೋ ಪ್ಲ್ಯಾನ್ ಮಾಡಿಸಿ ಇವನ್ನು ಹಬ್ಬಿಸುತ್ತಾರೆ ಅನಿಸುತ್ತದೆ ಎಂದು ಅವರು ಹೇಳಿದರು.

ಅದೆಲ್ಲ ಸರಿ, ಬಿಜೆಪಿಯ ಎಲ್ಲ ಹಿರಿಯ ನಾಯಕರು ಮುಖ್ಯಮಂತ್ರಿ ಬದಲಾವಣೆ ಇಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಿದ್ದಾರೆ, ಆದರೆ ಕೆಲವು ನಾಯಕರ ಗುಪ್ತ ಸಭೆಗಳು, ದೆಹಲಿ ವರಿಷ್ಠರ ಮೌನ, ಬೊಮ್ಮಾಯಿಯವರಲ್ಲಿ ಕಾಣುವ ಹತಾಷೆ, ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕೆಲ ನಾಯಕರು ಒಳಗೊಳಗೇ ಬೀಗುತ್ತಿರುವುದು, ಪ್ರಲ್ಹಾದ್ ಜೋಶಿ ಅವರು ಬೇಡ ಅಂತ ಹೇಳುತ್ತಿದ್ದರೂ ಅನುಮಾನ ಮೂಡಿಸುತ್ತೆ ಮಾರಾಯ್ರೇ!

ಇದನ್ನೂ ಓದಿ:  ಮೇ 10 ರೊಳಗೆ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ನೀಡಬಹುದು: ಬಿ ಎಸ್ ಯಡಿಯೂರಪ್ಪ

Follow us on

Click on your DTH Provider to Add TV9 Kannada