ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
ವಿಜಯಪುರದ ಗಾಂಧಿನಗರದ ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರ ಮೇಲೆ ಭೀಕರ ಹಲ್ಲೆ ನಡೆದಿದೆ. ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬಾತ ಮುಂಗಡ ಹಣ ಪಡೆದು ಕೆಲಸಕ್ಕೆ ವಿಳಂಬ ಮಾಡಿದ್ದಕ್ಕೆ ಪೈಪ್‌ಗಳಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಚಿಕ್ಕಲಿಕಿ ಗ್ರಾಮದ ಕಾರ್ಮಿಕರು ಹಬ್ಬಕ್ಕೆಂದು ಊರಿಗೆ ಹೋಗಿ ತಡವಾಗಿ ಬಂದಿದ್ದಕ್ಕೆ ಈ ಹಲ್ಲೆ ನಡೆದಿದೆ. ಈ ಘಟನೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಿಜಯಪುರ, ಜನವರಿ 20: ಮೂವರು ಕಾರ್ಮಿಕರ (Labours) ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಅಮಾನುಷ ಘಟನೆ ವಿಜಯಪುರದ (Vijayapura) ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ. ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬಾತ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ್ ಎಂಬ ಮೂವರು ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾನೆ. ಮುಂಗಡವಾಗಿ ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಖೇಮು ರಾಠೋಡ್ ಪೈಪ್‌ಗಳಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾದ ಮೂವರು ಕಾರ್ಮಿಕರು, ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಊರಿಗೆ ಹೋಗಿ ವಾಪಸ್ ಬರಲು ವಿಳಂಬ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾರ್ಮಿಕರು ಎಷ್ಟೇ ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. “ಕಾರ್ಮಿಕರ ಮೇಲೆ ಇದೆಂಥ ದೌರ್ಜನ್ಯ, ಇಟ್ಟಂಗಿಭಟ್ಟಿ ಮಾಲೀಕನಿಂದ ರಾಕ್ಷಸಿ ಕೃತ್ಯ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.