ಮೈಸೂರಿನಲ್ಲೂ ಭಾರಿ ಮಳೆ, ಬೃಹತ್ ಮರ ಧರೆಗುರುಳಿ ಎರಡು ಕಾರು ಜಖಂ, ರಸ್ತೆ ಸಂಚಾರ ಸ್ಥಗಿತ, ತೆರವು ಕಾರ್ಯ ಜಾರಿಯಲ್ಲಿದೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಬಂಗಾಳ ಕೊಲ್ಲಿ ಮೇಲಿನ ಡಿಪ್ರೆಶನ್ ನಿಂದ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆ ಜೊತೆಗೆ ಜೋರಾಗಿ ಗಾಳಿಯೂ ಬೀಸುತ್ತಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ.
ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಕುಸಿತ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಸೋನೆ ಮಳೆ ಸುರಿಯುತ್ತಿದೆ. ಸಾಮಾನ್ಯ ಜನಜೀವನದ ಮೇಲೆ ಅದು ಭಾರಿ ಪರಿಣಾಮ ಬೀರಿದೆ. ಮಕ್ಕಳು, ಮಹಿಳೆಯರು ಮತ್ತು ವಯಸ್ಸಾದವರು ಮನೆಯಿಂದ ಆಚೆ ಬಾರದಂಥ ಸ್ಥಿತಿ ನಿರ್ಮಾಣವಾಗಿದೆ. ಕೊಡೆ, ರೇನ್ ಕೋಟ್ ಮತ್ತು ಜರ್ಕಿನ್ಗಳಿಲ್ಲದೆ ಹೊರಬರುವಂತಿಲ್ಲ. ಚೆನೈ ಸೇರಿದಂತೆ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಧೋ ಅಂತ ಮಳೆ ಸುರಿಯುತ್ತಿದೆ. ಚೆನೈ ನಗರವಂತೂ ನಡುಗಡ್ಡೆಯ ಹಾಗೆ ಗೋಚರಿಸುತ್ತಿದೆ.
ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಬಂಗಾಳ ಕೊಲ್ಲಿ ಮೇಲಿನ ಡಿಪ್ರೆಶನ್ ನಿಂದ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆ ಜೊತೆಗೆ ಜೋರಾಗಿ ಗಾಳಿಯೂ ಬೀಸುತ್ತಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ಒಂದು ಅನಾಹುತ ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿದೆ. ನಗರದ ಶ್ರೀ ಹರ್ಷ ರಸ್ತೆಯ ಡಾ ರಾಜಕುಮಾರ್ ಪಾರ್ಕ್ನಲ್ಲಿದ್ದ ಬೃಹದಾಕಾರದ ಮರವೊಂದು ಗುರುವಾರ ರಾತ್ರಿ ಉರುಳಿದ್ದರಿಂದ ಅಲ್ಲೇ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳು ಜಖಂಗೊಂಡಿವೆ ಮತ್ತ್ತು ಐದು ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿವೆ.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಮತ್ತು ಜನಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಗರ ಪಾಲಿಕೆಯವರು, ಗರಗಸಗಳಿಂದ ಮರದ ರೆಂಬೆಗಳನ್ನು ಕತ್ತರಿಸಿ ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದರು.