ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್

Edited By:

Updated on: Aug 10, 2026 | 11:26 AM

ಆನೇಕಲ್‌ನ ಕುಂಬಾರನಹಳ್ಳಿ ಬಡಾವಣೆಗೆ ಚಡ್ಡಿ ಗ್ಯಾಂಗ್‌ ನುಗ್ಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದೆ. ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯೊಬ್ಬರು ಕಿರುಚಿಕೊಂಡ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಜಿಗಣಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳರ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 10: ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್‌ ಹಾವಳಿ ಮತ್ತೆ ಆತಂಕ ಮೂಡಿಸಿದೆ. ಕುಂಬಾರನಹಳ್ಳಿಯ ಸೆಲೆಬ್ರಿಟಿ ಇಕೋ ಫ್ರಂಟ್‌ ಬಡಾವಣೆಗೆ ಶನಿವಾರ ರಾತ್ರಿ ನುಗ್ಗಿದ ಕಳ್ಳರ ತಂಡ, ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಕುಂಬಾರನಹಳ್ಳಿಯ ಚಂದ್ರಶೇಖರ್ ಹಾಗೂ ರಾಮರೆಡ್ಡಿ ಎಂಬುವವರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಕೃತ್ಯಕ್ಕೆ ಮುಂದಾಗಿದ್ದಾರೆ. ಮುಖ ಮುಚ್ಚಿಕೊಂಡು ಬಂದಿದ್ದ ಖದೀಮರು ಮನೆಯ ಗೇಟ್‌ ಕತ್ತರಿಸಲು ಯತ್ನಿಸಿದ್ದು, ಬಳಿಕ ಕಾಂಪೌಂಡ್‌ ಮೇಲೆ ಓಡಾಡಿ ಕಳ್ಳತನಕ್ಕೆ ಸ್ಕೆಚ್‌ ಹಾಕಿದ್ದಾರೆ ಎನ್ನಲಾಗಿದೆ.

ಕಳ್ಳರ ತಂಡದ ಕೆಲವರು ರಸ್ತೆಯಲ್ಲಿ ಓಡಾಡುತ್ತಿದ್ದರೆ, ಇನ್ನಿಬ್ಬರು ಮನೆಗಳ ಬಳಿ ಚಲನವಲನ ನಡೆಸಿದ್ದಾರೆ. ಈ ವೇಳೆ ಶಬ್ದ ಕೇಳಿಸಿಕೊಂಡ ಬಡಾವಣೆಯ ಮಹಿಳೆಯೊಬ್ಬರು ಕಿಟಕಿಯಿಂದ ಹೊರಗೆ ನೋಡಿದ್ದಾರೆ. ಕಳ್ಳರ ಚಲನವಲನ ಗಮನಿಸಿದ ಅವರು ಕಿರುಚಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ಬಡಾವಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಒಳಉಡುಪಿನಲ್ಲಿ ಸಂಚರಿಸುತ್ತಿದ್ದ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಪೊಲೀಸರಿಗೆ ತನಿಖೆಗೆ ಪ್ರಮುಖ ಸುಳಿವಾಗಿದೆ. ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾಗಿರುವ ಕಳ್ಳರ ಪತ್ತೆಗೆ ಜಿಗಣಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us