ಚೈತ್ರಾಳ ವಂಚನೆ ಮಾಹಿತಿ ಬಿಚ್ಚಿಟ್ಟ ಸಲೂನ್​ ಮಾಲೀಕನಿಗೆ ಧಮ್ಕಿ, ಆಡಿಯೋ ವೈರಲ್

| Updated By: ರಮೇಶ್ ಬಿ. ಜವಳಗೇರಾ

Updated on: Sep 14, 2023 | 11:47 AM

ಚೈತ್ರಾ ಕುಂದಾಪುರ ವಂಚನೆ ಆರೋಪದ ಮಾಹಿತಿ ನೀಡಿದ್ದಕ್ಕೆ ಸಲೂನ್​ ಮಾಲೀಕ ರಾಮುಗೆ ಧಮ್ಕಿ ಹಾಕಲಾಗಿದೆ. ಪ್ರಮುಖ ಆರೋಪಿ ಸ್ನೇಹಿತ ಸಾಕ್ಷಿದಾರನಿಗೆ ಓಪನ್​ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ.

ಬೆಂಗಳೂರು/ಚಿಕ್ಕಮಗಳೂರು, (ಸೆಪ್ಟೆಂಬರ್ 14): ಉದ್ಯಮಿ ಗೋವಿಂದ್​ ಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ಪಡೆದು, ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ(Chaitra Kundapura) ಸೇರಿದಂತೆ ಹಲವರನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣಕ್ಕೂ ಸ್ಫೋಟ ಅಂಶಗಳು ಬಯಲಾಗುತ್ತಿವೆ. ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತೆ ಎಂದು ಸ್ವತಃ ಚೈತ್ರಾ ಕುಂದಾಪುರ ಮಾಧ್ಯಮಗಳ ಮುಂದೆ ಹೊಸ ಬಾಂಬ್ ಸಿಡಿಸಿದ್ದಳು. ಅಲ್ಲದೇ ಗೋವಿಂದ್​ ಬಾಬು, ಚೈತ್ರಾ-ಸ್ವಾಮೀಜಿ ಭೇಟಿ ಫೋಟೋಸ್ ವೈರಲ್ ಆಗಿವೆ. ಇವೆಲ್ಲದರ ಮಧ್ಯೆ ಚೈತ್ರಾ ಕುಂದಾಪುರ ವಂಚನೆ ಆರೋಪದ ಮಾಹಿತಿ ನೀಡಿದ್ದಕ್ಕೆ ಸಲೂನ್​ ಮಾಲೀಕ ರಾಮುಗೆ ಧಮ್ಕಿ ಹಾಕಲಾಗಿದೆ.

ಹೌದು… ಆರೋಪಿ ಧನರಾಜ್​ ಸೂಚನೆ ಮೇರೆಗೆ ಚೆನ್ನನಾಯ್ಕ್​ಗೆ ಮೇಕಪ್ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ಸಲೂನ್ ಮಾಲೀಕ ರಾಮುಗೆ ನೂತನ್ ಧಮ್ಕಿ ಹಾಕಿದ್ದಾನೆ. ಧಮ್ಕಿ ಹಾಕಿರುವ ನೂತನ್ ಆರೋಪಿ ಧನರಾಜ್ ಸ್ನೇಹಿತನಾಗಿದ್ದು, ಯಾರನ್ನು ಕೇಳಿ ಮಾಧ್ಯಮಕ್ಕೆ ಹೇಳಿಕೆ ನೀಡಿದೆ. ನಮ್ಮನ್ನು ಎದುರು ಹಾಕಿಕೊಂಡು ಸಲೂನ್ ಅಂಗಡಿಯನ್ನು ನಡೆಸುತ್ತೀಯಾ? ಸಿಸಿಬಿ ಕಚೇರಿಯಲ್ಲಿ ಏನೇನು ಮಾಡುತ್ತಿದ್ದೇವೆ ಎನ್ನುವುದು ನಮಗೆ ಗೊತ್ತು. ಧನರಾಜ್​ ಹಾಗೂ ನನ್ನ ವಿರೋಧ ಕಟ್ಟಿಕೊಂಡು ಇರುತ್ತೀಯಾ ನೀನು? ಏಕೆ ನಾನೇ ಮೇಕಪ್ ಮಾಡಿದ್ದು, ಕಟಿಂಗ್ ಮಾಡಿದ್ದು ಎಂದು ಹೇಳಿದೆ ರಾಮುಗೆ ಧಮ್ಕಿ ಹಾಕಿದ್ದು, ಇದೀಗ ನೂತನ್​ ಆಡಿಯೋ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ