ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಮೂವರು ಅಧಿಕಾರಿಗಳು ಸಸ್ಪೆಂಡ್

Edited By:

Updated on: Nov 21, 2026 | 4:01 PM

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ 50 ಕೋಟಿ ರೂ. ಮೌಲ್ಯದ ರೈತರ ಮತ್ತು ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಸಿಬ್ಬಂದಿ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಇಬ್ಬರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಗ್ರಾಮ ಸೇವಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಚಿಕ್ಕಬಳ್ಳಾಪುರ, ನವೆಂಬರ್ 21: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರೈತರ ಹಾಗೂ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಂದಾಯ ಇಲಾಖೆಯ ಗ್ರಾಮ ಸೇವಕಿ ಹೆಸರಿಗೆ ವರ್ಗಾಯಿಸಿರುವ ಹಗರಣ ಬೆಳಕಿಗೆ ಬಂದಿದೆ. ಬಾಗೇಪಲ್ಲಿಯ ಪೂಲವಾರಪಲ್ಲಿ ಗ್ರಾಮದ ಸರ್ವೇ ನಂಬರ್ 7, 64, 44/1 ರಲ್ಲಿನ 11 ಎಕರೆ 12 ಗುಂಟೆ ರೈತರ ಜಮೀನು ಹಾಗೂ ಸರ್ವೇ ನಂಬರ್ 47 ರಲ್ಲಿನ 4 ಎಕರೆ ಸರ್ಕಾರಿ ಜಮೀನು ಸೇರಿದಂತೆ ಒಟ್ಟು 15 ಎಕರೆ 12 ಗುಂಟೆ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ.

ಕಂದಾಯ ಇಲಾಖೆಯ ವಿ.ಎ. ಎಲ್.ಕೆ. ಮಂಜುನಾಥ್, ಎಫ್.ಡಿ.ಎ. ಕಮ್ ಆರ್.ಐ. ಪ್ರಶಾಂತ್ ಎಸ್.ಎ. ಮತ್ತು ಭೂಮಿ ಕೇಂದ್ರದ ವಿ.ಎ. ಮಂಜುಳಾ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಮುಖ್ಯವಾಗಿ ಹಕ್ಕು ದಾಖಲೆ ಶಿರಸ್ತೇದಾರ ಬಿ.ಎಂ. ಮಂಜುನಾಥ್ ಅವರ ಕುಮ್ಮಕ್ಕಿನಿಂದ ಗ್ರಾಮ ಸೇವಕಿ ಪಿ.ಜಿ. ಶಿವಮ್ಮ ಹೆಸರಿಗೆ ಈ ಜಮೀನು ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಹಸ್ತಕ್ಷೇಪದ ನಂತರ ಅಧಿಕಾರಿಗಳು ರಾತ್ರೋರಾತ್ರಿ ಖಾತೆಗಳನ್ನು ಬದಲಾಯಿಸಿದ್ದಾರೆ. ವಿಷಯ ತಿಳಿದ ಜಿಲ್ಲಾಧಿಕಾರಿ ಪ್ರಭು ಜಿ. ಅವರು ಪ್ರಶಾಂತ್, ಮಂಜುನಾಥ್ ಮತ್ತು ಮಂಜುಳಾ ಅವರನ್ನು ಅಮಾನತುಗೊಳಿಸಿದ್ದು, ಗ್ರಾಮ ಸೇವಕಿ ಶಿವಮ್ಮಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಶಿರಸ್ತೇದಾರ ಬಿ.ಎಂ. ಮಂಜುನಾಥ್ ಮತ್ತು ತಹಶೀಲ್ದಾರ್ ಮನೀಷಾ ಎನ್. ವಿರುದ್ಧ ಶಿಸ್ತುಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More