“ಇಟ್ಟ ರಾಮನ ಬಾಣ ಹುಸಿಯಿಲ್ಲ” ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಮಹಾನವಮಿ ಬಯಲಿನಲ್ಲಿ ರವಿವಾರ ನಸುಕಿನ ಜಾವ ಕಾರ್ಣಿಕ ನುಡಿಯಲಾಯಿತು. ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಕೇಳಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ಮಹಾನವಮಿ ಬಯಲಿನಲ್ಲಿ ಇಂದು (ಅ.13) ನಸುಕಿನ ಜಾವ 4:45ರ ಸುಮಾರಿಗೆ ಕಾರ್ಣಿಕ ನುಡಿಯಲಾಯಿತು. “ಇಟ್ಟ ರಾಮನ ಬಾಣ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿಗೆ ಸಂಪಾಯಿತಲೇ ಪರಾಕ್” ಎಂದು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕವನ್ನು ಗೊರವಯ್ಯ ನುಡಿದರು.
ಕಾರ್ಣಿಕ ಅರ್ಥ
ಈ ವರ್ಷದ ಕಾರ್ಣಿಕಕ್ಕೆ ಗೊರವಯ್ಯ ಅರ್ಥ ನೀಡಿದ್ದಾರೆ. ರಾಜ್ಯದಲ್ಲಿ ಮುಂದೆ ನಡೆಯಬಹುದಾದ ಅನಾಹುತಗಳ ಬಗ್ಗೆ ಜ್ಞಾನಿಗಳು ತಿಳಿಸುತ್ತಾರೆ. ಹೀಗಾಗಿ, ಜನರು ಜ್ಞಾನಿಗಳು ನುಡಿಯುವ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿ. ಅಲ್ಲದೇ, ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಕೆಲವರು ಜೈಲು ಪಾಲಾಗಿದ್ದಾರೆ. ಈ ಪ್ರಕರಣಗಳಲ್ಲಿ ಸತ್ಯಕ್ಕೆ ಜಯವಾಗುವುದಿಲ್ಲ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯವಾಗುತ್ತದೆ. ಇದೆಲ್ಲದರ ನಡುವೆಯೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂದು ಗೊರವಯ್ಯ ಕಾರ್ಣಿಕದ ಅರ್ಥ ತಿಳಿಸಿದ್ದಾರೆ.
ನ್ಯಾಯದ ತಕ್ಕಡಿ ಜರುಗಿತ್ತು: ರಾಜ್ಯದಲ್ಲಿ ನ್ಯಾಯಕ್ಕೆ ಜಯ ಸಿಗದೇ ಅನ್ಯಾಯಕ್ಕೆ ಜಯವಾಗುತ್ತೆ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯವಾಗುತ್ತೆ.
ಜ್ಞಾನದ ಹಣತೆ ಹಚ್ಚಿದರು: ರಾಜ್ಯದಲ್ಲಿ ನಡೆಯ ಬಹುದಾದ ಘಟನೆ ಬಗ್ಗೆ ಮುಂಚಿತವಾಗಿ ಜ್ಞಾನಿಗಳು ಮಾಹಿತಿ ನೀಡುತ್ತಾರೆ.
ಜೀವ ರಾಶಿಗೆ ಸಂಪಾಯಿತಲೇ ಪರಾಕ್ ಅರ್ಥ : ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಕಲ ಜೀವರಾಶಿಗಳು ಸಂಪಾಗಿರುತ್ತೆ.
ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಹಲವು ಬಾರಿ ನುಡಿದಂತೆ ನಿಜವಾಗಿದೆ. ಹೀಗಾಗಿ ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕ ಕೂಡ ಮಹತ್ವ ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನೆಲ್ಲ ಸಂಭವಿಸುತ್ತವೆ ಕಾದು ನೋಡಬೇಕಿದೆ. ಇನ್ನು ಮೈಲಾರಲಿಂಗೇಶ್ವರ ಕಾರ್ಣಿಕ ಕೇಳಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ