ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿವಾದ: ಕಲ್ಮ ವಿರೋಧಿ ಬರಹ ಆರೋಪ, ಎಸ್ಪಿಗೆ ದೂರು

Edited By:

Updated on: Nov 06, 2026 | 2:54 PM

ಚಿಕ್ಕಮಗಳೂರಿನ ಇಂದಾವರ ಖಬರಸ್ಥಾನದಲ್ಲಿರುವ ರಿಜ್ವಾನ್ ಅವರ ಸಮಾಧಿಗೆ ಹಸಿರು ಬಟ್ಟೆ ಹೊದಿಸಿ ಗೋರಿ ನಿರ್ಮಿಸಲು ಯತ್ನ ಹಾಗೂ ಕಲ್ಮಗೆ ವಿರುದ್ಧವಾದ ಬರಹ ಬರೆಯಲಾಗಿದೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಸದ್ಯ, ಹೊಸ ವಿವಾದ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರು ಎಸ್ಪಿಗೆ ದೂರು ನೀಡಿದ್ದಾರೆ.

ಚಿಕ್ಕಮಗಳೂರು, ನವೆಂಬರ್ 6: ಪಾಕಿಸ್ತಾನದ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರ ಅನುಯಾಯಿಗೆ ಸಂಬಂಧಿಸಿದ ಸಮಾಧಿಯ ವಿಚಾರ ಚಿಕ್ಕಮಗಳೂರಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ನಗರದ ಹೊರವಲಯದ ಇಂದಾವರ ಖಬರಸ್ಥಾನದಲ್ಲಿರುವ ರಿಜ್ವಾನ್ ಸಮಾಧಿಗೆ ಹಸಿರು ಬಟ್ಟೆ ಹೊದಿಸಿ ಗೋರಿ ನಿರ್ಮಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಸಮಾಧಿಯ ಬಳಿ ಕಲ್ಮಗೆ ವಿರುದ್ಧವಾದ ಅಥವಾ ತಿದ್ದುಪಡಿ ಮಾಡಿದ ಬರಹ ಬರೆಯಲಾಗಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಜ್ವಾನ್ ಅವರ ಸಹೋದರ ಬರ್ಕತ್ ಡಿಎಆರ್ ಪೊಲೀಸ್ ಸಿಬ್ಬಂದಿಯಾಗಿದ್ದು, ಅವರ ಕುಟುಂಬ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರ ಅನುಯಾಯಿಗಳಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ಮೃತಪಟ್ಟಿದ್ದ ಬರ್ಕತ್ ಅವರ ಸಹೋದರ ರಿಜ್ವಾನ್ ಅವರ ಅಂತ್ಯಕ್ರಿಯೆಯನ್ನು ಇಂದಾವರದ ಖಬರಸ್ಥಾನದಲ್ಲಿ ನಡೆಸಲಾಗಿತ್ತು. ಆಗಲೂ ಈ ಕುರಿತು ಮುಸ್ಲಿಂ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ರಿಜ್ವಾನ್ ಮೃತಪಟ್ಟ ಒಂದು ವರ್ಷದ ಬಳಿಕ ಅವರ ಸಮಾಧಿಗೆ ಹಸಿರು ಬಟ್ಟೆ ಹೊದಿಸಿ ಗೋರಿ ನಿರ್ಮಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ, ಸಮಾಧಿಯ ಸಮೀಪ ಕಲ್ಮಗೆ ವಿರುದ್ಧವಾದ ಬರಹ ಬರೆಯಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಯಾಜ್ ಅಹ್ಮದ್ ಗೋಹರ್ ಶಾಹಿ ಮತ್ತು ಅವರ ಬೆಂಬಲಿಗರನ್ನು ಮುಸ್ಲಿಂ ವಿರೋಧಿಗಳೆಂದು ಪರಿಗಣಿಸುವ ಸಮುದಾಯದ ಕೆಲವು ಮುಖಂಡರು, ಇಂದಾವರ ಖಬರಸ್ಥಾನದಲ್ಲಿರುವ ಈ ನಿರ್ಮಾಣ ಮತ್ತು ಬರಹವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮುಸ್ಲಿಂ ಸಮುದಾಯದ ಮುಖಂಡರು ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ವೇಳೆ ರಿಜ್ವಾನ್ ಅವರ ಸಹೋದರ, ಡಿಎಆರ್ ಪೊಲೀಸ್ ಸಿಬ್ಬಂದಿ ಬರ್ಕತ್ ಅವರೊಂದಿಗೆ ಸಮುದಾಯದ ಮುಖಂಡರ ನಡುವೆ ವಾಗ್ವಾದವೂ ನಡೆದಿದೆ. ಇಂದಾವರ ಖಬರಸ್ಥಾನದಲ್ಲಿ ಆರಂಭವಾಗಿರುವ ಈ ವಿವಾದ ಇದೀಗ ಹೊಸ ಸ್ವರೂಪ ಪಡೆಯುತ್ತಿದ್ದು, ದೂರು ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More