ಲೋಕಸಭಾ ಚುನಾವಣೆ: ಬಿಜೆಪಿ ಬಗ್ಗೆ ಅಚ್ಚರಿಯ ಕಾರ್ಣಿಕ ನುಡಿದ ಜಿಗಣೆಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ

| Updated By: Ganapathi Sharma

Updated on: Feb 26, 2024 | 8:50 AM

Jiganehalli Mailaralingeshwara Karanika: ಲೋಕಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಇಂಥ ಸಂದರ್ಭದಲ್ಲೇ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯವರಿಗೆ ಜಿಗಣೆಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕದ ನುಡಿ ಖುಷಿ ಕೊಡುವಂತಿದೆ. ಮತ್ತೆ ಕಮಲ ಅರಳಲಿದೆ, ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿರಲಿದೆ ಎಂಬರ್ಥದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದಿದ್ದಾರೆ.

ಚಿಕ್ಕಮಗಳೂರು, ಫೆಬ್ರವರಿ 26: ಲೋಕಸಭೆ ಚುನಾವಣೆಗೆ (Lok Sabha Elections 2024) ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಎನ್ನುವಾಗಲೇ, ಮತ್ತೆ ಕೇಂದ್ರದಲ್ಲಿ ಬಿಜೆಪಿಯೇ (BJP) ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬರ್ಥದಲ್ಲಿ ಜಿಗಣೆಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ (Jiganehalli Mailaralingeshwara Karanika) ನುಡಿದಿದ್ದಾರೆ. ಜತೆಗೆ, ಮಳೆ-ಬೆಳೆ ಚೆನ್ನಾಗಿ ಆಗಲಿದೆ ಎಂಬ ಆಶಾವಾದದ ನುಡಿಯನ್ನೂ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿಯಲ್ಲಿ ಹೇಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜಿಗಣೆಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಈ ಭಾಗದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ.

‘ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿದಿದ್ದಾರೆ. ಈ ವರ್ಷ ಮಳೆ ಬೆಳೆ ಸಮೃದ್ಧವಾಗಿ ಆಗುತ್ತದೆ. ಮತ್ತೆ ಕಮಲ ಪಕ್ಷ ಅರಳುವುದು ನಿಶ್ಚಿತ ಎಂಬುದೇ ಇದರ ಅರ್ಥವೆಂದು ಭಕ್ತರು ವ್ಯಾಖ್ಯಾನಿಸಿದ್ದಾರೆ. ಕಾರ್ಣಿಕ ನುಡಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಮೊದಲೇ ಆತಂಕದಲ್ಲಿರುವ ಕಾಂಗ್ರೆಸ್​​ಗೆ ಮತ್ತೊಂದು ಆಘಾತ!

ಮಾರ್ಚ್ ಮೊದಲ ವಾರ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ನಿರೀಕ್ಷೆ ಇದೆ. ಲೋಕಸಭೆ ಚುನಾವಣೆ ಸಿದ್ಧತೆ ಸಂಬಂಧ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ರಾಜ್ಯ ಘಟಕಗಳಿಂದ ಮಾಹಿತಿ ಕೇಳಿದೆ. ಏಪ್ರಿಲ್​ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮೇ ಮೊದಲ ವಾರ ಅಥವಾ ಎರಡನೇ ವಾರ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ