ದರ್ಶನ್​ ಕೇಸ್: ವಿಚಾರಣೆ ಬಳಿಕ ಚಿಕ್ಕಣ್ಣ ಪ್ರತಿಕ್ರಿಯೆ; ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ

| Updated By: ಮದನ್​ ಕುಮಾರ್​

Updated on: Jun 17, 2024 | 10:58 PM

ಹಲವು ಗಂಟೆಗಳ ಕಾಲ ನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಟ ದರ್ಶನ್​ ಸಿಲುಕಿಕೊಂಡಿರುವ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಚಿಕ್ಕಣ್ಣ ಅವರಿಗೂ ಪೊಲೀಸರು ಪ್ರಶ್ನೆ ಕೇಳಿದ್ದಾರೆ. ವಿಚಾರಣೆ ಮುಗಿದ ಬಳಿಕ ಪೊಲೀಸ್​ ಠಾಣೆಯಿಂದ ಹೊರಬಂದ ಚಿಕ್ಕಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಒಂದೆರಡು ಪ್ರಶ್ನೆ ಕೇಳುತ್ತಿದ್ದಂತೆಯೇ ಅವರು ಮಾತು ನಿಲ್ಲಿಸಿ ತೆರಳಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ (Renuka Swamy Murder) ಪ್ರಕರಣದಲ್ಲಿ ದರ್ಶನ್​ (Darshan) ಪ್ರಮುಖ ಆರೋಪಿ ಆಗಿದ್ದು, ಅವರ ಸ್ನೇಹಿತರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇಂದು (ಜೂನ್​ 17) ನಟ ಚಿಕ್ಕಣ್ಣ ಅವರನ್ನೂ ಪೊಲೀಸರು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹಲವು ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಆ ಬಳಿಕ ಪೊಲೀಸ್​ ಠಾಣೆಯಿಂದ ಹೊರಗೆ ಬಂದ ಚಿಕ್ಕಣ್ಣ (Chikkanna) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಎಲ್ಲರಿಗೂ ಗೊತ್ತಿರುವಂತೆ, ನಾವು ಯಾವಾಗಲೂ ಊಟಕ್ಕೆ ಸೇರುತ್ತಿದ್ದೆವು. ಅದೇ ರೀತಿ ಅವತ್ತು ಕೂಡ ಊಟಕ್ಕೆ ಕರೆದಿದ್ರು. ನಾನು ಊಟಕ್ಕೆ ಹೋಗಿದ್ದೆ. ಅದರ ಬಗ್ಗೆ ಕೇಳಲು ಪೊಲೀಸರು ಕರೆದಿದ್ದರು. ಪೊಲೀಸರ ವಿಚಾರಣೆಗೆ ನಾನು ಸಹಕರಿಸಿದ್ದೇನೆ’ ಎಂದು ಚಿಕ್ಕಣ್ಣ ಹೇಳಿದ್ದಾರೆ. ಅಂದು ಪಾರ್ಟಿಯಲ್ಲಿ ಯಾರೆಲ್ಲ ಇದ್ರು ಎಂದು ಪ್ರಶ್ನೆ ಕೇಳಿದ್ದಕ್ಕೆ ಚಿಕ್ಕಣ್ಣ ಉತ್ತರ ನೀಡಿಲ್ಲ. ‘ಇದು ತನಿಖೆಯ ಹಂತದಲ್ಲಿ ಇರುವುದರಿಂದ ನಾನು ಇದರ ಬಗ್ಗೆ ಜಾಸ್ತಿ ಏನೂ ಹೇಳೋಕೆ ಆಗಲ್ಲ’ ಎಂದು ಅವರು ಹೇಳಿದ್ದಾರೆ. ಮುಂದಿನ ಪ್ರಶ್ನೆ ಕೇಳುತ್ತಿದ್ದಂತೆಯೇ ಚಿಕ್ಕಣ್ಣ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.