ರೇಣುಕಾ ಸ್ವಾಮಿ ಕೊಲೆ ಕೇಸ್ ಮಹಜರು; ದರ್ಶನ್ ಸ್ನೇಹಿತ ಚಿಕ್ಕಣ್ಣ ನೀಡಿದ ಹೇಳಿಕೆ ಏನು?
ಚಿತ್ರದುರ್ಗದ ರೇಣುಕಾ ಸ್ವಾಮಿಯ ಹತ್ಯೆ ನಡೆದ ದಿನ ನಟರಾದ ದರ್ಶನ್ ಹಾಗೂ ಚಿಕ್ಕಣ್ಣ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಜೊತೆಯಾಗಿ ಊಟ ಮಾಡಿದ್ದರು. ಆ ಭೇಟಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಇಂದು (ಜೂನ್ 17) ಮಹಜರು ಮಾಡಲಾಗಿದೆ. ಈ ವೇಳೆ ಚಿಕ್ಕಣ್ಣ ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ.
ಕೊಲೆ ಆರೋಪಿಯಾಗಿ ದರ್ಶನ್ (Darshan) ಬಂಧನವಾಗಿರುವುದು ಚಿತ್ರರಂಗಕ್ಕೆ ಕಪ್ಪುಚುಕ್ಕಿ ಆಗಿದೆ. ದರ್ಶನ್ ಜೊತೆಗಿದ್ದ ಅನೇಕರು ಈ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಹಾಗಾಗಿ ಅನೇಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ, ನಟ ಚಿಕ್ಕಣ್ಣ (Chikkanna) ಅವರನ್ನು ಕೂಡ ಮಹಜರಿಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಹಾಗಾಗಿ ಇಂದು (ಜೂನ್ 17) ಚಿಕ್ಕಣ್ಣ ಆರ್ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಮಹಜರಿನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ರೇಣುಕಾ ಸ್ವಾಮಿಯ ಕೊಲೆ ನಡೆಯುವುದಕ್ಕೂ ಮುನ್ನ ಇದೇ ರೆಸ್ಟೋರೆಂಟ್ನಲ್ಲಿ ದರ್ಶನ್, ಚಿಕ್ಕಣ್ಣ ಮುಂತಾದವರು ಜೊತೆಯಾಗಿ ಊಟ ಮಾಡಿದ್ದರು ಎನ್ನಲಾಗಿದೆ. ಆ ಕಾರಣದಿಂದಲೇ ಚಿಕ್ಕಣ್ಣ ಅವರನ್ನು ಮಹಜರಿಗೆ ಕರೆಯಲಾಗಿದೆ. ಹತ್ಯೆ ನಡೆದ ದಿನವೇ ಸ್ಟೋನಿ ಬ್ರೂಕ್ಗೆ ಹೋಗಿ ದರ್ಶನ್ರನ್ನು ಭೇಟಿ ಮಾಡಿದ್ದು ಯಾಕೆ ಎಂಬ ಬಗ್ಗೆ ಚಿಕ್ಕಣ್ಣ ಕಾರಣ ತಿಳಿಸಿದ್ದಾರೆ.
‘ದರ್ಶನ್ ಕರೆ ಮಾಡಿ ಊಟಕ್ಕೆ ಬರುವಂತೆ ಕರೆದಿದ್ರು. ಹೀಗಾಗಿ ಊಟ ಮಾಡಲೆಂದು ಸ್ಟೋನಿ ಬ್ರೂಕ್ಗೆ ಹೋಗಿದ್ದೆ. ದರ್ಶನ್ ಮತ್ತು ನಾನು ಸ್ನೇಹಿತರು. ಹೀಗಾಗಿ ಊಟಕ್ಕೆ ಸೇರುತ್ತಿರುತ್ತೇವೆ. ಅವತ್ತು ಕೂಡ ನನ್ನನ್ನು ಊಟಕ್ಕೆ ಕರೆದಿದ್ದರು. ಆದ್ದರಿಂದ ಅಲ್ಲಿಗೆ ಹೋಗಿದ್ದೆ. ಬಳಿಕ ಅಲ್ಲಿ ಏನಾಯ್ತು ಅಂತ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಹಾಗೂ ಬೇರೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಾಗಲೇ ಈ ವಿಚಾರದ ಬಗ್ಗೆ ಗೊತ್ತಾಯ್ತು. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಂಕಾಗಿ ಬಂದು ವ್ಯಾನ್ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್ ಮಹಜರು
ಚಿಕ್ಕಣ್ಣ ಮತ್ತು ದರ್ಶನ್ ನಡುವೆ ಸ್ನೇಹ ಇದೆ. ಚಿಕ್ಕಣ್ಣ ನಟನೆಯ ಸಿನಿಮಾಗಳಿಗೆ ದರ್ಶನ್ ಬೆಂಬಲ ನೀಡುತ್ತಾ ಬಂದಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದುಂಟು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸುದ್ದಿ ಹೊರಬಿದ್ದ ಬಳಿಕ ಚಿಕ್ಕಣ್ಣ ಯಾವುದೇ ಹೇಳಿಕೆ ನೀಡಿರಲಿಲ್ಲ. ಈಗ ಪೊಲೀಸರ ಎದುರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತಮ್ಮ ಹೇಳಿಕೆ ನೀಡಿದ್ದಾರೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಆರೋಪ ಇದೆ. ಹಾಗಾಗಿ ಆತನನ್ನು ಬೆಂಗಳೂರಿಗೆ ಕರೆದುಕೊಂಡ ಬಂದ ದರ್ಶನ್ ಗ್ಯಾಂಗ್ನ ಸದಸ್ಯರು ಹಲ್ಲೆ ಮಾಡಿದ್ದಾರೆ. ಈ ಕೇಸ್ಗೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದೆ. ಪವಿತ್ರಾ ಗೌಡ, ದರ್ಶನ್, ಸೇರಿದಂತೆ ಅನೇಕರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.