‘ಎಂಥ ನೀಚ ಮನಸ್ಥಿತಿ’: ದರ್ಶನ್ ಕ್ರೌರ್ಯದ ಬಗ್ಗೆ ‘ಕೆರೆಬೇಟೆ’ ಗೌರಿಶಂಕರ್ ಮಾತು
ನಟ ದರ್ಶನ್ ಮತ್ತು ಸಹಚರರು ಸೇರಿ ಮಾಡಿದ್ದಾರೆ ಎನ್ನಲಾದ ಕೊಲೆ ಪ್ರಕರಣದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸ್ಯಾಂಡಲ್ವುಡ್ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ವಿವರಗಳನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ದರ್ಶನ್ ಮತ್ತು ಗ್ಯಾಂಗ್ ತೋರಿದ ಕ್ರೌರ್ಯದ ಬಗ್ಗೆ ಅನೇಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಷ್ಟು ದಿನ ಸ್ಟಾರ್ ಆಗಿದ್ದ ದರ್ಶನ್ (Darshan) ಈಗ ಕೊಲೆ ಆರೋಪಿ. ಅಭಿಮಾನಿಯನ್ನೇ ಕೊಂದ ಆರೋಪ ದರ್ಶನ್ ಮೇಲಿದೆ. ಚಿತ್ರದುರ್ಗದಿಂದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ದರ್ಶನ್ ಮತ್ತು ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಘಟನೆಯ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ರಮ್ಯಾ, ಉಪೇಂದ್ರ, ಕಿಚ್ಚ ಸುದೀಪ್ ಮುಂತಾದವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಕೆರೆಬೇಟೆ’ ಚಿತ್ರದ ನಟ, ನಿರ್ಮಾಪಕ ಗೌರಿಶಂಕರ್ (Gowrishankar) ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶೀಲ ಸಂದೇಶ ಕಳಿಸಿದ ಆರೋಪ ರೇಣುಕಾ ಸ್ವಾಮಿಯ ಮೇಲಿದೆ. ಅದೇ ಕಾರಣಕ್ಕಾಗಿ ಆತನಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು ಎಂಬ ಆರೋಪ ಇದೆ. ಈ ಘಟನೆಯನ್ನು ಗೌರಿಶಂಕರ್ ಖಂಡಿಸಿದ್ದಾರೆ. ‘ಕಾರಣ ಏನೇ ಇರಲಿ, ಆದರೆ ಒಬ್ಬ ಮನುಷ್ಯನನ್ನು ಹೊಡೆದು ಕೊಲ್ಲುವಷ್ಟು ಕ್ರೌರ್ಯವಿದೆ ಎಂದರೆ ಅದು ಎಂಥ ನೀಚ ಮನಸ್ಥಿತಿ ಇರಬಹುದು’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
‘ಕೊಲೆಯಾದ ವ್ಯಕ್ತಿ ಕೆಟ್ಟದಾಗಿ ಮೆಸೇಜ್ ಮಾಡಿರೋದು ತಪ್ಪೇ. ಅದಕ್ಕೆ ಬೈದು ಅಥವಾ ಎರಡು ಹೊಡೆತ ಹೊಡೆದು, ಇಲ್ಲವೇ ಪೊಲೀಸ್ ಕಂಪ್ಲೇಂಟ್ ನೀಡಿ ಸರಿಯಾದ ಕ್ರಮ ತೆಗೆದುಕೊಳ್ಳುವಂತಹ ಎಲ್ಲ ಶಕ್ತಿ ಇತ್ತು. ಅದನ್ನ ಬಿಟ್ಟು ಮಾನವೀಯತೆಯೇ ಇಲ್ಲದೇ ಹೊಡೆದು ಹೊಡೆದು ಕೊಲೆ ಮಾಡುತ್ತಾರೆಂದರೆ ಏನ್ ಹೇಳ್ಬೇಕು? ಕೊಲೆಯಾದವನ ಹೆಂಡತಿ ಮೂರು ತಿಂಗಳು ಬಸುರಿ. ಆ ಹೆಣ್ಣಿನ ಉಳಿದ ಬದುಕೇನು? ಸಾಯುವಾಗ ಅವನು ತನ್ನ ಬಸುರಿ ಹೆಂಡತಿಯನ್ನು, ಹೊಟ್ಟೆಯಲ್ಲಿರುವ ಆ ಕಂದನನ್ನು ನೆನಪು ಮಾಡಿಕೊಳ್ಳದೇ ಇರುತ್ತಾನಾ? ಅದಕ್ಕಾಗಿ ಎಷ್ಟು ಅಂಗಲಾಚಿರುತ್ತಾನೋ’ ಎಂದು ಬರೆದಿದ್ದಾರೆ ಗೌರಿಶಂಕರ್.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್ನ ಆರೋಪಿ ದರ್ಶನ್ ಬಗ್ಗೆ ಸುದೀಪ್ ಮೊದಲ ಮಾತು
‘ಇಷ್ಟೆಲ್ಲಾ ಆದಮೇಲೆ ಈ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಅಭಿಮಾನಿಗಳಿದ್ರೆ ಒಮ್ಮೆ ನಿಮ್ಮ ತಂದೆ, ತಾಯಿ, ಅಕ್ಕ, ತಂಗಿ ಹೆಂಡತಿ ಮಕ್ಕಳನ್ನು ನೆನಪು ಮಾಡಿಕೊಳ್ಳಿ. ಹಣಬಲ, ತೋಳುಬಲ, ಕೀರ್ತಿ, ಯಶಸ್ಸು ಇದ್ದರೆ ಏನು ಬೇಕಾದ್ರೂ ಮಾಡ್ತಾರೆ. ಏನು ಬೇಕಾದ್ರೂ ಜೈಸ್ತಾರೆ ಅನ್ನೋ ಮನಸ್ಥಿತಿ ಜನಸಾಮಾನ್ಯನಿಗೆ ಬಂದು ಕಾನೂನಿನ ಮೇಲೆ, ಖಾಕಿಯ ಮೇಲೆ, ಕರಿಕೋಟಿನ ಮೇಲೆ ನಂಬಿಕೆ ಕಳಚಿ ಹೋಗಿದೆ. ಈ ಪ್ರಕರಣದಲ್ಲಿ ದೊಡ್ಡವರು ಸಣ್ಣವರು ಅನ್ನೋದಿಲ್ಲ ಎಲ್ಲರಿಗೂ ಒಂದೇ ಕಾನೂನು, ಒಂದೇ ಸಂವಿಧಾನ ಎನ್ನುವ ನ್ಯಾಯಪರತೆಯ ತನಿಖೆಯಾಗಿ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಲಿ ಎನ್ನುವುದು ನಮ್ಮಂತಹ ಸಾಮಾನ್ಯರ ಬೇಡಿಕೆ’ ಎಂದಿದ್ದಾರೆ ಗೌರಿಶಂಕರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.