ಬಿಜೆಪಿ ನೂರು ಕೋಟಿ ಆಫರ್ ಸುಳ್ಳು: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೆಚ್ಡಿ ತಮ್ಮಯ್ಯ ಹೇಳಿದ್ದೇನು ನೋಡಿ!
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂಪಾಯಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿದೆ ಎಂಬ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ಹೇಳಿಕೆ ಸುಳ್ಳು ಎಂದು ಕಿತ್ತೂರಿನ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಹೇಳಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ, ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್ಡಿ ತಮ್ಮಯ್ಯ ಕೂಡ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರು, ನವೆಂಬರ್ 18: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂಪಾಯಿ ಅಲ್ಲ, 100 ಕೋಟಿ ರೂಪಾಯಿ ಆಫರ್ ಬಂದಿದೆ ಎಂಬ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ಪ್ರತಿಪಕ್ಷ ಯಾವೆಲ್ಲ ಶಾಸಕರನ್ನು ಸಂಪರ್ಕಿಸಿದೆ ಎಂಬ ಹೆಸರನ್ನೂ ಉಲ್ಲೇಖಿಸಿದ್ದರು. ಅದರಲ್ಲಿ, ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಹಾಗೂ ಚಿಕ್ಕಮಗಳೂರಿನ ಶಾಸಕ ಹೆಚ್ಡಿ ತಮ್ಮಯ್ಯ ಹೆಸರೂ ಇತ್ತು. ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಡಿದ್ದ ಬಾಬಾಸಾಹೇಬ್ ಪಾಟೀಲ್, ಅದೊಂದು ಸುಳ್ಳು ಹೇಳಿಕೆ ಎಂದಿದ್ದರು. ಇದೀಗ ತಮ್ಮಯ್ಯ ಕೂಡ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದಿದ್ದಾರೆ.
100 ಕೋಟಿ ಆಫರ್ ವಿಚಾರವಾಗಿ ‘ಟಿವಿ9’ಗೆ ಪ್ರತಿಕ್ರಿಯಿಸಿದ ತಮ್ಮಯ್ಯ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಯಾರು ಹೇಳಿದ್ದಾರೆಯೋ ಅವರನ್ನೇ ಕೇಳಬೇಕು ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಇದನ್ನೂ ಓದಿ: 100 ಕೋಟಿ ಆಫರ್: ನನ್ನನ್ನು ಯಾರೂ ಸಂಪರ್ಕಿಸಿಲ್ಲವೆಂದ ಕಿತ್ತೂರು ಕಾಂಗ್ರೆಸ್ ಶಾಸಕ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಜನರು 136 ಶಾಸಕರ ಬಲ ನೀಡಿದ್ದಾರೆ ಸಿದ್ದರಾಮಯ್ಯನವರ ಸರ್ಕಾರದ ಪರ ಜನಾದೇಶವಿದೆ. ಆಫರ್ ಬಗ್ಗೆ ನನಗೆ ಗೊತ್ತಿಲ್ಲ, ಅದರ ಬಗ್ಗೆ ಎಲ್ಲ ಮಾತನಾಡುವಷ್ಟು ನಾನು ದೊಡ್ಡವನು ಅಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಖಂಡಿತವಾಗಿ ನನ್ನ ಯಾರು ಸಂಪರ್ಕ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ