IPL 2026: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ; ಚಿನ್ನಸ್ವಾಮಿಯಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯ
IPL 2026 Opening Ceremony: ಜೂನ್ 4ರ ದುರ್ಘಟನೆಯ ಬಳಿಕ ಸ್ಥಗಿತಗೊಂಡಿದ್ದ ಬೆಂಗಳೂರು ಕ್ರಿಕೆಟ್‌ಗೆ ಶುಭ ಸುದ್ದಿ ಸಿಕ್ಕಿದೆ. ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷರಾದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡಿವೆ. 2026ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಬಿಸಿಸಿಐ ಆಸಕ್ತಿ ತೋರಿಸಿದೆ. ಅಂತರರಾಷ್ಟ್ರೀಯ ಪಂದ್ಯಗಳೂ ನಡೆಯಲಿವೆ. ರಾಜ್ಯ ಸರ್ಕಾರದ ಜೊತೆ ಸಭೆ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಅದೊಂದು ದುರ್ಘಟನೆಯ ಬಳಿಕ ಇನ್ನು ಮುಂದೆ ಬೆಂಗಳೂರಿನಲ್ಲಿ ಯಾವ ಕ್ರಿಕೆಟ್ ಪಂದ್ಯವೂ ನಡೆಯುವುದಿಲ್ಲ ಎಂದು ಬೇಸರದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಶುಭ ಸುದ್ದಿಯೊಂದು ಸಿಕ್ಕಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಜ್ಯ ಕ್ರಿಕೆಟ್‌ಗೆ ಮರುಜನ್ಮ ಸಿಕ್ಕಿದ್ದು, ಚಿನ್ನಸ್ವಾಮಿಯಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆ ಗರಿಗೆದರಿದೆ. ಮಾತ್ರವಲ್ಲದೆ 2026 ರ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ವೆಂಕಟೇಶ್, ಬಿಸಿಸಿಐ ಕಾರ್ಯದರ್ಶಿಯನ್ನು ಭೇಟಿಯಾಗಿದ್ದು, ಅವರು 2026 ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಆಸಕ್ತಿ ತೋರಿಸಿದ್ದಾರೆ. ಐಪಿಎಲ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಪಂದ್ಯಗಳು ಕೂಡ ಇನ್ನು ಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಆದಾಗ್ಯೂ ನಾವು ರಾಜ್ಯ ಸರ್ಕಾರದ ಬಳಿ ಈ ಬಗ್ಗೆ ಮಾತನಾಡಬೇಕಿದೆ. ಅವರ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ.
