ಬಸ್ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ? ತಜ್ಞ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ ನೋಡಿ
ಚಿತ್ರದುರ್ಗದ ಖಾಸಗಿ ಬಸ್ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಚಿತ್ರದುರ್ಗ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ಅವರು ತಿಳಿಸಿದಂತೆ, ಡಿಎನ್‌ಎ ಪರೀಕ್ಷೆ ಮೂಲಕ ಗುರುತು ಪತ್ತೆ ಮಾಡಲಾಗುತ್ತದೆ. ಮೃತದೇಹಗಳ ಗುರುತು ಪತ್ತೆ ಬಗ್ಗೆ ಅವರು ನೀಡಿರುವ ವಿವರಣೆಯ ವಿಡಿಯೋ ಇಲ್ಲಿದೆ.
ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಅನೇಕ ಮಂದಿ ಮೃತಪಟ್ಟಿದ್ದು, ಹಲವು ಮಂದಿ ಸುಟ್ಟು ಕರಕಲಾಗಿದ್ದಾರೆ. ಅವರ ಮೃತದೇಹಗಳ ಗುರುತು ಪತ್ತೆ ಮಾಡುವುದು ಸವಾಲಾಗಿದೆ. ಪ್ರಸ್ತುತ, ನಾಲ್ಕು ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವು ಅತಿ ಹೆಚ್ಚು ಸುಟ್ಟುಹೋಗಿರುವ ಕಾರಣ ನೇರವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.
ಮೃತದೇಗಳ ಪತ್ತೆ ಕಾರ್ಯದ ಬಗ್ಗೆ ಚಿತ್ರದುರ್ಗದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. ಮೃತದೇಹಗಳ ಗುರುತು ಪತ್ತೆಗಾಗಿ ಸಂಬಂಧಿಕರು ಮುಂದಾಗಬೇಕಿದ್ದು, ಒಂದು ವೇಳೆ ಗುರುತು ಪತ್ತೆಯಾಗದಿದ್ದಲ್ಲಿ ಡಿಎನ್‌ಎ ಪರೀಕ್ಷೆ ಅನಿವಾರ್ಯವಾಗುತ್ತದೆ. ಡಿಎನ್‌ಎ ಪರೀಕ್ಷೆಗಾಗಿ ಮೋಲಾರ್ ಟೂತ್ ಮತ್ತು ಎದೆಯ ಸ್ಟರ್ನಮ್ ಮೂಳೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಸುಮಾರು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಮೃತದೇಹಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂರಕ್ಷಿಸಿಡಲಾಗುತ್ತದೆ. ವಿಧಿವಿಜ್ಞಾನ ತಜ್ಞರಾದ ಡಾ. ವೇಣು ಮತ್ತು ಡಾ. ಅಜಯ್ ಅವರು ಈ ಗುರುತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೈಜ್ಞಾನಿಕ ವಿಧಾನದ ಮೂಲಕ ಮೃತದೇಹಗಳ ಗುರುತು ಖಚಿತಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ರವೀಂದ್ರ ತಿಳಿಸಿದ್ದಾರೆ. ಅವರ ಮಾತಿನ ವಿಡಿಯೋ ಇಲ್ಲಿದೆ.
