ರಮೇಶ ಜಾರಕಿಹೊಳಿ ದಿವಾಳಿಯಾಗಿದ್ದರೆ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವ ಮೊದಲು ಪ್ರತಿಕ್ರಿಯೆ ನೀಡಲಿ: ಡಿಕೆ ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 07, 2022 | 5:23 PM

ಶಾಂತಚಿತ್ತರಾಗಿಯೇ ಉತ್ತರಿಸಿದ ಶಿವಕುಮಾರ ಅವರು, ಜಾರಕಿಹೊಳಿ ಇದುವರೆಗೆ ಎಷ್ಟು ಕೋಟಿ ರೂಪಾಯಿಗಳನ್ನು ತೆರಿಗೆ ಕಟ್ಟಿದ್ದಾರೆ, ಅವರ ವ್ಯವಾಹಾರ ಎಷ್ಟಿದೆ ಅಂತೆಲ್ಲ ವಿವರ ನೀಡಲಿ ಎಂದರು

Belagavi: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ (Ramesh Jarkiholi) ನಡುವೆ ಬಹಳ ಸಮಯದಿಂದ ಜಗಳ ಜಾರಿಯಲ್ಲಿದೆ. ಜಾರಕಿಹೊಳಿ ಕಾಂಗ್ರೆಸ್ (Congress) ಪಕ್ಷದಲ್ಲಿದ್ದಾಗಿನಿಂದಲೂ ಅವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮಾಧ್ಯಮಗಳ ಮುಂದೆ ಒಬ್ಬರು ಇನ್ನೊಬ್ಬರ ವಿರುದ್ಧ ಆರೋಪಗಳನ್ನು ಮಾಡೋದು ಕನ್ನಡಿಗರು ಗಮನಿಸುತ್ತಿದ್ದಾರೆ. ಇದರಿಂದ ಜನರಿಗೆ ಮನರಂಜನೆ ಹೊರತು ಬೇರೇನೂ ಸಿಗುವುದಿಲ್ಲ. ಶಿವಕುಮಾರ ಅವರು ಶನಿವಾರ ಬೆಳಗಾವಿಯಲ್ಲಿದ್ದರು. ಇತ್ತೀಚಿಗೆ ರಮೇಶ ಜಾರಕಿಹೊಳಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರ ವಿರುದ್ಧ 25 ಲಕ್ಷ ರೂ. ಗಳ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ತಮ್ಮ ಹಾಗೂ ಈಶ್ವರಪ್ಪನವರ ವಿರುದ್ಧ ಷಡ್ಯಂತ್ರ ನಡೆದಿದೆ ಮತ್ತು ನಮ್ಮನ್ನು ಟಾರ್ಗೆಟ್ ಮಾಡಲಾಗಿದ್ದು ಇದರ ಹಿಂದೆ ಮಹಾನಾಯಕನ ಕೈವಾಡವಿದೆ ಎಂದು ಹೇಳಿದ್ದರು. ಅದನ್ನು ಬೆಳಗಾವಿಯ ಪತ್ರಕರ್ತರು ಶನಿವಾರದಂದು ಶಿವಕುಮಾರ ಅವರ ಗಮನಕ್ಕೆ ತಂದರು.

ಶಾಂತಚಿತ್ತರಾಗಿಯೇ ಉತ್ತರಿಸಿದ ಶಿವಕುಮಾರ ಅವರು, ಜಾರಕಿಹೊಳಿ ಇದುವರೆಗೆ ಎಷ್ಟು ಕೋಟಿ ರೂಪಾಯಿಗಳನ್ನು ತೆರಿಗೆ ಕಟ್ಟಿದ್ದಾರೆ, ಅವರ ವ್ಯವಾಹಾರ ಎಷ್ಟಿದೆ ಅಂತೆಲ್ಲ ವಿವರ ನೀಡಲಿ, ಆದ್ಯಾವನೋ ಸ್ಟಿಂಗ್ ಆಪರೇಶನ್ ಮಾಡಲು ಬಂದವನಿಗೆ ಅವರು ದುಡ್ಡು ಕೊಟ್ಟು ಕಳಿಸಿರುವುದು ಎಲ್ಲರಿಗೂ ಗೊತ್ತಿದೆ, ಅದರ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ ಎಂದು ಹೇಳಿದರು.

ಬೆಳಗಾವಿಯ ಜನ ಅವರನ್ನು ಸಾಹುಕಾರ ಅಂತ ಕರೀತೀರಿ. ಆದರೆ ತಮ್ಮ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದೆ ಅಂತ ಮೊನ್ನೆ ಅವರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಅವರ ಸದರಿ ಜಾಹೀರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮತ್ತು ಸಹಕಾರ ಸಚಿವ ಎಸ್ ಟಿ ಸೋಮಶೇಖರ ಮೊದಲು ಪ್ರತಿಕ್ರಿಯೆ ನೀಡಲಿ, ಅಮೇಲೆ ನಾವು ಚರ್ಚೆ ಮಾಡೋಣ ಎಂದು ಕೆ ಪಿ ಸಿ ಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿದರು.

ಇದನ್ನೂ ಓದಿ:   Promod Madhwaraj: ಡಿಕೆ ಶಿವಕುಮಾರ್​ಗೆ ಖೇದದ ಪತ್ರ ಬರೆದು, ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

Published on: May 07, 2022 05:19 PM