ಅಭಿಮಾನಿ ಕೊಟ್ಟ ರಾಯರ ಫೋಟೊ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ! ಶುರುವಾಯ್ತು ಚರ್ಚೆ
ಸಿಎಂ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಕೊಟ್ಟ ರಾಘವೇಂದ್ರ ಸ್ವಾಮಿಗಳ ಫೋಟೊ ಸ್ವೀಕರಿಸಲು ನಿರಾಕರಿಸಿ ವಾಪಸ್ ಕೊಟ್ಟ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಈ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಯರ ಫೋಟೊವನ್ನು ಸಿದ್ದರಾಮಯ್ಯ ತಿರಸ್ಕರಿಸಿದ ವಿಡಿಯೋ ಇಲ್ಲಿದೆ.
ಬೆಂಗಳೂರು, ಜನವರಿ 19: ಅಭಿಮಾನಿಯೊಬ್ಬರು ಕೊಟ್ಟ ರಾಘವೇಂದ್ರ ಸ್ವಾಮಿಗಳ ಫೋಟೊ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದು, ವಾಪಸ್ ನೀಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಟ್ಟಿದ್ದಾರೆ. ತಕ್ಷಣವೇ ಅದನ್ನು ಆತನಿಗೆ ವಾಪಸ್ ಕೊಟ್ಟ ಸಿಎಂ ಆತನನ್ನು ದುರುಗುಟ್ಟಿ ನೋಡಿದ್ದಾರೆ. ಇದೇ ವೇಳೆ, ಚಾಣಕ್ಯನ ಕುರಿತಾದ ಪುಸ್ತಕವನ್ನು ಅಭಿಮಾನಿಯೊಬ್ಬ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅದೇ ರೀತಿ ಇದೀಗ ರಾಯರ ಫೋಟೊ ತಿರಸ್ಕರಿಸಿದ್ದೂ ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ಹಿಂದೂ ದೇವರನ್ನು ಕಂಡರೆ ಆಗಿ ಬರಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೇ ಆಗಿ ಬರುವುದಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಮಾಡಿದರು, ಆಗ ಕೋಮು ಗಲಭೆಗಳು ಆದವು. ಕೋಗಿಲು ಲೇಔಟ್ನ ಮುಸ್ಲಿಮರಿಗೆ ಮನೆಗಳು ಕೊಡುವುದು ಇತ್ಯಾದಿ ಅದು ಅವರ ನಿರಂತರ ಪ್ರಕ್ರಿಯೆ ಎಂದು ಕಿಡಿಕಾರಿದರು.
ಹಿಂದೂಗಳು ಕೂಡ ಎಚ್ಚರಿಕೆಯಿಂದ ಇರಬೇಕು. ಬಹುಸಂಖ್ಯಾತ ಹಿಂದೂಗಳು ಸಿದ್ದರಾಮಯ್ಯಗೆ ಪಾಠ ಕಲಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.
ಯಾರು ಏನೇ ನೀಡಿದರೂ ಸ್ವೀಕರಿಸುವುದು ಸೌಜನ್ಯತೆಯ ನಡೆ. ಪ್ರೀತಿಯಿಂದ ಕೊಟ್ಟರೇ ಅವರ ನಂಬಿಕೆ ಭಾವನೆಗೆ ಗೌರವ ನೀಡಬೇಕು. ಜನರ ಭಾವನೆಗಳನ್ನು ಗೌರವಿಸುವ ಜವಾಬ್ದಾರಿ ಜನಪ್ರತಿನಿಧಿಗೆ ಇರುತ್ತದೆ. ಯಾವುದೇ , ಧರ್ಮ, ಏನೇ ಇದ್ದರೂ ಭಾವನೆಗಳನ್ನು ಗೌರವಿಸಬೇಕು. ವ್ಯಕ್ತಿ ತಂದುಕೊಟ್ಟಿದ್ದನ್ನು ಸ್ವೀಕಾರ ಮಾಡುವುದು ಸೌಜನ್ಯತೆ ನಡವಳಿಕೆ. ಸಿದ್ದರಾಮಯ್ಯನವರಂತಹ ನಾಯಕರಿಂದ ಇಂತಹ ನಡೆ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯ ಹೀಗೆ ನಡೆದುಕೊಂಡಿದ್ದರೆ ಅದನ್ನು ಖಂಡಿಸುತ್ತೇನೆ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು