ನಮಗೆ ವೋಟು ಹಾಕಿ ಅಧಿಕಾರ ನೀಡಿದ ಜನರನ್ನು ಬಿಜೆಪಿಯಿಂದ ಯಾಮಾರಿಸಲಾಗದು: ಸಿದ್ದರಾಮಯ್ಯ

|

Updated on: Jul 10, 2024 | 6:59 PM

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣ ಆರಂಭಿಸುವ ಮೊದಲು ಸಂಸದ ಸುನೀಲ್ ಬೋಸ್ ರನ್ನು ಕರೆದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡರು. ಅವರ ಭಾಷಣ ಮುಗಿಯುವರೆಗೆ ಬೋಸ್ ಒಬ್ಬ ವಿಧೇಯ ವಿದ್ಯಾರ್ಥಿಯ ಹಾಗೆ ಕೈಕಟ್ಟಿ ನಿಂತಿದ್ದರು. ಸಿದ್ದರಾಮಯ್ಯ ಹೇಳಿದ ಮಾತುಗಳನ್ನೂ ಅಷ್ಟೇ ವಿಧೇಯನಾಗಿ ಬೋಸ್ ಪಾಲಿಸಿದರೆ ಅವರನ್ನು ಆರಿಸಿದ ಜನ ಸಂತೋಷಪಡುತ್ತಾರೆ.

ಚಾಮರಾಜನಗರ: ನಗರದಲ್ಲಿ ನಡೆದ ಸಂಸದ ಸುನೀಲ್ ಬೋಸ್ ಸತ್ಕಾರ ಸಮಾರಂಭದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇನೇ ಹೇಳಿದರೂ, ಸಾಧನೆಗಳ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ಮತ್ತು ಏನೇ ಬೊಗಳೆ ಬಿಟ್ಟರೂ ಜನ ನೀಡುವ ತೀರ್ಮಾನವೇ ಅಂತಿಮ ಎಂದರು. ಬಿಜೆಪಿ ನಾಯಕರು ಅಂದುಕೊಂಡಿರುವಂತೆ ಮತದಾರರು ದಡ್ಡರಲ್ಲ. ಅವರು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅದರೆ ಅವರನ್ನು ಯಾಮಾರಿಸುವುದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕಳೆದ ಸಲ ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು, ಅದರೆ ಅವರಲ್ಲಿ ಯಾರೊಬ್ಬರು ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿಲ್ಲ, ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದರೂ ರಾಜ್ಯಕ್ಕೆ ದಕ್ಕಬೇಕಿದ್ದ ಪರಿಹಾರ ನಿಧಿಯ ಬಗ್ಗೆ ಚಕಾರವೆತ್ತಲಿಲ್ಲ, ಅದನ್ನು ಪಡೆಯಲು ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟ್ ಮೊರೆ ಹೋಗಬೇಕಾಯಿತು, ಸರ್ವೋಚ್ಛ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಎನ್​ಡಿಆರ್​ಎಫ್ ಪರಿಹಾರ ನಿಧಿ ಬಿಡುಗಡೆ ಮಾಡಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸುನೀಲ್ ಬೋಸ್ ಸತ್ಕಾರ ಸಮಾರಂಭದಲ್ಲಿ ಮಹಿಳೆಯೊಬ್ಬರು ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು