ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಕಾರಣವೆಂದರು ಜೆಡಿ(ಎಸ್) ವಕ್ತಾರ ಸರವಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2022 | 6:53 PM

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಅದನ್ನು ತಡೆಯಲು ಪೌರುಷವಿಲ್ಲದ ಬಿಜೆಪಿ ಸರ್ಕಾರವನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಸರವಣ ರೋಷದಿಂದ ಹೇಳಿದರು.

ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಜೆಡಿ(ಎಸ್) ಪಕ್ಷದ ವಕ್ತಾರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಸರವಣ ಅವರು ಪಾದಯಾತ್ರೆಯಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ರಾಜ್ಯಕ್ಕೆ ಮತ್ತು ಬೆಂಗಳೂರು ನಗರಕ್ಕೆ ಗಂಡಾಂತರ ಎದುರಾದರೆ ಅದಕ್ಕೆ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳೇ ನೇರ ಹೊಣೆಗಾರರಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಬೆಂಗಳೂರಲ್ಲಿ ಟಿವಿ9 ವರದಿಗಾರ ಸುನಿಲ್ ಜೊತೆ ಮಾತಾಡಿದ ಸರವಣ ಅವರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಹಟಕ್ಕೆ ಬಿದ್ದವರಂತೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದರೆ, ಅದನ್ನು ತಡೆಯಲಾಗದ ಕರ್ನಾಟಕ ಬಿಜೆಪಿ ಸರ್ಕಾರ ಬೆನ್ನುಮೂಳೆ ಇಲ್ಲದ್ದು ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಿಗೆ ಸಾಮಾಜಿಕ ಹೊಣೆಗಾರಿಕೆ ಇಲ್ಲ. ಬೇರೆ ಪಕ್ಷಗಳ ನಾಯಕರ ಬಗ್ಗೆ ನಾಲಗೆ ಹರಿಬಿಡುವ ಹೊನ್ನಾಳಿ ಬಿಜೆಪಿ ಶಾಸಕ ತಮ್ಮ ಕ್ಷೇತ್ರದಲ್ಲಿ ಹೋರಿ ಹಬ್ಬ ಆಯೋಜಿಸುತ್ತಾರೆ, ಹಿರಿಯ ನಾಯಕ ಕೆ ಎಸ್ ಈಶ್ವರಪ್ಪನವರು ಒಂದು ಬೃಹತ್ ಸಮಾರಂಭವನ್ನು ನಡೆಸುತ್ತಾರೆ ಮತ್ತು ಚಿಕ್ಕಬಳ್ಳಾಪುರದಲ್ಲೂ ಕೆಲ ಬಿಜೆಪಿ ನಾಯಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸುತ್ತಾರೆ. ಅಧಿಕಾರದಲ್ಲಿರುವವರು ಬೇರೆಯವರಿಗೆ ಮಾದರಿಯಾಗುವ ಬದಲು ತಾವೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ, ಇವರಿಗೆ ಜವಾಬ್ದಾರಿ ಅನ್ನೋದು ಇಲ್ಲವೇ ಎಂದು ಸರವಣ ಕೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಮಾಡುತ್ತಿರುವ ಹೀನ, ನೀಚ ಮತ್ತು ಕೀಳುಮಟ್ಟದ ರಾಜಕಾರಣವನ್ನು ಜೆಡಿ(ಎಸ್) ಖಂಡಿಸುತ್ತದೆ ಎಂದು ಸರವಣ ಹೇಳಿದರು.

ಜನಸಾಮಾನ್ಯರಿಗೊಂದು, ಗಣ್ಯರಿಗೊಂದು ನಿಯಮ ಇರೋದಿಕ್ಕೆ ಸಾಧ್ಯವಿಲ್ಲ. ಜನರಿಗೆ ಅನ್ವಯಿಸುವ ಕೋವಿಡ್ ನಿಯಮಗಳು ರಾಜಕಾರಣಿಗಳಿಗೂ ಅನ್ವಯಿಸುತ್ತವೆ ಎಂದ ಸರವಣ ಅವರು ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಕೇಳಿದರು. 25 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ರಾಜ್ಯದಲ್ಲಿ ಆಡಳಿತ ಸೂತ್ರ ಹಿಡಿದಿವೆ. ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಯೋಚನೆಯನ್ನೇ ಮಾಡದವರು ಚುನಾವಣೆ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಏನೇನೋ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಸರವಣ ಟೀಕಿಸಿದರು.

ಪಾದಾಯಾತ್ರೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಮನವಿಯೊಂದನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಪಕ್ಷ ಮತ್ತ ಸರ್ಕಾರ ಎರಡಕ್ಕೂ ಛೀಮಾರಿ ಹಾಕಿದೆ ಎಂದು ಹೇಳಿದ ಸರವಣ ಅವರು ಪಾದಯಾತ್ರೆಯ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರಾದ ಎನ್ ಎಚ್ ಶಿವಶಂಕರ ರೆಡ್ಡಿ, ಎಚ್ ಎಮ್ ರೇವಣ್ಣ ಮತ್ತು ಸಿ ಎಮ್ ಇಬ್ರಾಹಿಂ ಮೊದಲಾದವರು ಕೋವಿಡ್ ಸೋಂಕಿಗೊಳಗಾಗಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ತಡೆಯಲು ಪೌರುಷವಿಲ್ಲದ ಬಿಜೆಪಿ ಸರ್ಕಾರವನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಸರವಣ ರೋಷದಿಂದ ಹೇಳಿದರು.

ಇದನ್ನೂ ಓದಿ:   ರಂಗುರಂಗಿನ ದಿರಿಸಿನಲ್ಲಿ ಜೆನಿಲಿಯಾ ಡಿಸೋಜ ಚೆಂಗುಲಾಬಿಯಂತೆ ಕಾಣುತ್ತಾರೆ, ವಿಡಿಯೋ ನೋಡಿ ಮರುಳಾಗ್ತೀರಾ!!

Published on: Jan 12, 2022 06:47 PM