ತಮ್ಮ ಹುಟ್ಟುಹಬ್ಬದಂದು ಶಾಸಕಿ ಸೌಮ್ಯರೆಡ್ಡಿ ಸದನದಲ್ಲಿ ಅಂಗನವಾಡಿ ಕೇಂದ್ರಗಳ ದುರವಸ್ಥೆಯನ್ನು ಪ್ರಸ್ತಾಪಿಸಿದರು

ತಮ್ಮ ಹುಟ್ಟುಹಬ್ಬದಂದು ಶಾಸಕಿ ಸೌಮ್ಯರೆಡ್ಡಿ ಸದನದಲ್ಲಿ ಅಂಗನವಾಡಿ ಕೇಂದ್ರಗಳ ದುರವಸ್ಥೆಯನ್ನು ಪ್ರಸ್ತಾಪಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 18, 2022 | 7:46 PM

ಅವರ ಕ್ಷೇತ್ರದಲ್ಲಿ 17 ಅಂಗನವಾಡಿ ಕೇಂದ್ರಗಳಿದ್ದು ಯಾವುದಕ್ಕೂ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೇಳುವ ಸೌಮ್ಯ, ಹಿಂದೆ ಶಶಿಕಲಾ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದಲೂ ಸಮಸ್ಯೆಗಳ ಪ್ರಸ್ತಾಪ ಮಾಡಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ ಎನ್ನುತ್ತಾರೆ.

ಜಯನಗರದ ಕಾಂಗ್ರೆಸ್ ಶಾಸಕಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ, ಶಾಸಕ ಮತ್ತು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿಯವರಿಗೆ (Soumya Reddy) ಶುಕ್ರವಾರ ಹುಟ್ಟುಹಬ್ಬ (birthday). ಸದನದ ಹಾಜರಿದ್ದ ಎಲ್ಲ ಸದಸ್ಯರ ಪರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡ ಕಾಗೇರಿ (Vishweshwar Hegde Kageri) ಅವರು ಸೌಮ್ಯಗೆ ಶುಭಾಷಯಗಳನ್ನು ತಿಳಿಸಿದರು. ಶುಕ್ರವಾರ ಶೂನ್ಯವೇಳೆಯಲ್ಲಿ ಸೌಮ್ಯ ಅವರು ಗಣಿ ಮತ್ತು ಭೂಗರ್ಭಶಾಸ್ತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು ವಿಕಲಚೇತನರ ಸಬಲೀಕರಣ ಖಾತೆ ಸಚಿವ ಹಾಲಪ್ಪ ಆಚಾರ್ (Halappa Achar) ಅವರಿಗೆ ಅಂಗನವಾಡಿಗಳ ದುರವಸ್ಥೆ ಬಗ್ಗೆ ಸುದೀರ್ಘವಾದ ಪ್ರಶ್ನೆ ಕೇಳುತ್ತಾರೆ. ಅವರ ಕ್ಷೇತ್ರದಲ್ಲಿ 17 ಅಂಗನವಾಡಿ ಕೇಂದ್ರಗಳಿದ್ದು ಯಾವುದಕ್ಕೂ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೇಳುವ ಸೌಮ್ಯ, ಹಿಂದೆ ಶಶಿಕಲಾ ಜೊಲ್ಲೆ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದಲೂ ಸಮಸ್ಯೆಗಳ ಪ್ರಸ್ತಾಪ ಮಾಡಿದ್ದು ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ ಎನ್ನುತ್ತಾರೆ.

ಸಚಿವ ಆಚಾರ್ ಎದ್ದುನಿಂತು ಸೌಮ್ಯ ಅವರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಲಾಗಿದೆ ಎನ್ನುತ್ತಾರೆ. ಅದಕ್ಕೆ ಸೌಮ್ಯ ಸಚಿವರು ನೀಡಿರುವ ಉತ್ತರ ನನಗೆ ಬಹಳ ನೋವುಂಟು ಮಾಡಿದೆ ಎನ್ನುತ್ತಿರುವಾಗಲೇ ಸ್ಪೀಕರ್ ಮಧ್ಯೆಪ್ರವೇಶಿಸಿ ಸಚಿವರು ಕೊಟ್ಟಿರುವ ಉತ್ತರಕ್ಕೆ ಉಪಪ್ರಶ್ನೆ ಕೇಳಿ, ಅವರು ಹೇಳಿರುವುದು ಯಾವಾಗ ಅನುಷ್ಠಾನಗೊಳ್ಳುತ್ತೆ ಅಂತ ಕೇಳಿ ಅಂತ ಅವರಿಗೆ ಹೇಳಿ ಆಚಾರರೇ ಉತ್ತರ ನೀಡಿ ಅನ್ನುತ್ತಾರೆ.

ಆಗ ಎದ್ದುನಿಲ್ಲುವ ಸಚಿವರು, ಸೌಮ್ಯ ಅವರದ್ದು ಇಂದು ಹುಟ್ಟುಹಬ್ಬ, ಇವತ್ತಿನ ದಿನ ಅವರು ಮನಸ್ಸಿಗೆ ನೋವು ಮಾಡಿಕೊಳ್ಳಬಾರದು ಅಂತ ಹೇಳಿದಾಗ ಸದನದಲ್ಲಿದ್ದ ಉತ್ತರ ಕರ್ನಾಟಕದ ಸದಸ್ಯರೊಬ್ಬರು (ಯಾರೂಂತ ಗೊತ್ತಾಗದು) ಜೋರಾದ ಧ್ವನಿಯಲ್ಲಿ, ‘ನೀವು ಛಲೋತ್ನಾಗಿ ಉತ್ರ ಕೊಟ್ರ ಸೌಮ್ಯ ಅವರ್ದು ನೋವು ದೂರಾಗ್ತದ,’ ಎಂದಾಗ ಸದನ ನಗೆಗಡಲಲ್ಲಿ ಮುಳುಗುತ್ತದೆ.

ಇದನ್ನೂ ಓದಿ:  ಭಿತ್ತಿಪತ್ರ ಹಿಡಿದು ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್; ಸದನದಲ್ಲಿ ಗಾಂಭೀರ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ