ಕಾಂಗ್ರೆಸ್ ಶಾಸಕರು ನಿರಶನ ಹೂಡಿದ್ದು ವಿಧಾನ ಸೌಧದ ಒಂದು ಭಾಗದಲ್ಲಿ ಸಣ್ಣ ಬಿರುಕು ಬಿಟ್ಟಿದ್ದನ್ನು ಪತ್ತೆ ಮಾಡಲು ನೆರವಾಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2022 | 5:48 PM

ಶಾಸಕರು ಅಹೋರಾತ್ರಿ ಧರಣಿ ನಡೆಸುವಾಗ ಅವರಲ್ಲಿ ಕೆಲವರು ಬೆಳಗಿನ ಜಾವ ಸೌಧದ ಸುತ್ತ ವಾಕ್ ಮಾಡುತ್ತಿದ್ದರು. ಹಾಗೆ ಮಾಡುವಾಗ ವಿಧಾನ ಸೌಧದ ಒಂದು ಭಾಗದಲ್ಲಿ ಒಂದು ಬಿರುಕನ್ನು ಇವರಿಬ್ಬರು ಗಮನಿಸಿ ಅದನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರ ಕೇಸರಿ ಧ್ವಜ (saffron flag) ಹಾರಿಸುವ ಹೇಳಿಕೆ ಹಿನ್ನೆಲೆಯಲ್ಲಿ ಅವರು ಅವರ ರಾಜೀನಾಮೆ ಆಗ್ರಹಿಸಿ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ 4-5 ದಿನಗಳ ಕಾಲ ಅಹೋರಾತ್ರಿ ಧರಣಿ ಮತ್ತು ಹೋರಾಟ ನಡೆಸಿದ್ದ ಕಾಂಗ್ರೆಸ್ ಶಾಸಕರು ಮಂಗಳವಾರ ನಿರಶನಕ್ಕೆ ಅಂತ್ಯ ಹೇಳಿದರು. ಮಂಗಳವಾರದಿಂದ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ವಿಧಾನ ಪರಿಷತ್ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಲೇ ಬೇಕು ಎಂದು ಕೌನ್ಸಿಲ್ ನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ (chief whip) ರಾಥೋಡ್ ಅವರು ವಿಪ್ ಜಾರಿಗೊಳಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಓಕೆ, ಕಾಂಗ್ರೆಸ್ ಶಾಸಕರು ನಡೆಸಿದ ಧರಣಿ ಎಷ್ಟು ಪರಿಣಾಮಕಾರಿಯಾಗಿತ್ತು, ಅವರು ಎಷ್ಟರ ಮಟ್ಟಿಗೆ ಸಫಲರಾದರು, ಪಕ್ಷಕ್ಕೆ ಎಷ್ಟು ಉಪಯೋಗವಾಯಿತು, ಎಲ್ಲ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರೇ ಉತ್ತರ ನೀಡಬೇಕು. ಆದರೆ, ಅವರು ನಡೆಸಿದ ಧರಣಿಯಿಂದ ವಿಧಾನ ಸೌಧ ಭವ್ಯ ಕಟ್ಟಡದ ಒಂದು ಭಾಗಕ್ಕೆ ಮಾತ್ರ ಪಕ್ಕಾ ಲಾಭ ಆಗಿದೆ.

ಹೇಗೆ ಅಂತೀರಾ? ವಿಧಾನ ಪರಿಷತ್ ಸದಸ್ಯರಾಗಿರುವ ಡಾ ಕೆ ಗೋವಿಂದರಾಜ್ ಮತ್ತು ಯುಬಿ ವೆಂಕಟೇಶ್ ಮಾತಾಡುತ್ತಿರುವುದನ್ನು ಕೇಳಿಸಿಕೊಳ್ಳಿ. ಶಾಸಕರು ಅಹೋರಾತ್ರಿ ಧರಣಿ ನಡೆಸುವಾಗ ಅವರಲ್ಲಿ ಕೆಲವರು ಬೆಳಗಿನ ಜಾವ ಸೌಧದ ಸುತ್ತ ವಾಕ್ ಮಾಡುತ್ತಿದ್ದರು. ಹಾಗೆ ಮಾಡುವಾಗ ವಿಧಾನ ಸೌಧದ ಒಂದು ಭಾಗದಲ್ಲಿ ಒಂದು ಬಿರುಕನ್ನು ಇವರಿಬ್ಬರು ಗಮನಿಸಿ ಅದನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.

ಅವರು ತಿಳಿಸಿ ಬಳಿಕ ಬಿರುಕು ಬಿಟ್ಟ ಜಾಗವನ್ನು ತೇಪೆ ಹಾಕಿ ರಿಪೇರಿ ಮಾಡಲಾಗಿದೆ. ಅದನ್ನೇ ಗೋವಿಂದರಾಜ್ ಮತ್ತು ವೆಂಕಟೇಶ್ ಮಾಧ್ಯಮದವರಿಗೆ ಹೆಮ್ಮೆಯಿಂದ ತೋರಿಸುತ್ತಿದ್ದಾರೆ. ನಾವು ನೋಡಿದ್ದಕ್ಕೆ ಒಳ್ಳೆದಾಯ್ತು, ಇಲ್ಲಾಂದ್ರೆ ಕಟ್ಟಡಕ್ಕೆ ಹಾನಿಯಾಗುತಿತ್ತು ಅನ್ನುವ ಹಾಗಿದೆ ಅವರ ಮಾತಿನ ವರಸೆ!

ನೋಡಿದ್ರಾ, ನಿರಶನ ಮಾಡುತ್ತಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯದ ಆಸ್ತಿ ಮತ್ತು ಅದರ ನಿರ್ವಹಣೆ ಬಗ್ಗೆ ಯೋಚಿಸುತ್ತಿರುತ್ತಾರೆ!!

ಇದನ್ನೂ ಓದಿ:  ಸಚಿವ ಕೆ.ಎಸ್​. ಈಶ್ವರಪ್ಪನವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ; ಕೇಸರಿ ಧ್ವಜ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯೆ