ಯಾದಗಿರಿ: ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳು ಬಳಸಿದ ತಟ್ಟೆಗಳನ್ನು ತೊಳೆಯಲು ಅಡುಗೆ ಸಿಬ್ಬಂದಿ ನಿರಾಕರಿಸಿದ ಘಟನೆ ನಡೆದಿದೆ. 3000 ರೂ. ವೇತನ ಪಡೆಯುವ ಅಡುಗೆ ಸಿಬ್ಬಂದಿ, ದಲಿತ ಮಕ್ಕಳ ತಟ್ಟೆ ತೊಳೆಯಲು ನಿರಾಕರಿಸಿ ಅಡುಗೆ ಮನೆಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಮೂರು ದಿನಗಳಿಂದ ಬಿಸಿಯೂಟ ಸ್ಥಗಿತವಾಗಿದೆ. ದಲಿತ ಮುಖಂಡರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
ಯಾದಗಿರಿ, ಫೆಬ್ರವರಿ 24: ಶಹಾಪುರ (Shapur) ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ದಲಿತ ವಿದ್ಯಾರ್ಥಿಗಳು ಬಿಸಿಯೂಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಿಬ್ಬಂದಿ ನಿರಾಕರಿಸಿದ ಆರೋಪ ಕೇಳಿಬಂದಿದೆ. ಶಾಲೆಗೆ ದಾನಿಯೊಬ್ಬರು 200 ಸ್ಟೀಲ್ ತಟ್ಟೆ ನೀಡಿದ್ದಾರೆ. ಆದರೆ, ದಲಿತ ಮಕ್ಕಳು ಊಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಿಬ್ಬಂದಿಯಾದ ಸಿದ್ದಮ್ಮ ಹಿರೇಮಠ ಹಾಗೂ ಶಾಂಭವಿ ನಾಯ್ಕೋಡಿ ಎಂಬುವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ 3 ಸಾವಿರ ಸಂಬಳದಲ್ಲಿ ದಲಿತರ ತಟ್ಟೆ ತೊಳೆಯಲ್ಲ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಡುಗೆ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಆಗ್ರಹಿಸಿದ್ದಾರೆ. ಹೀಗಾಗಿ, ಅಡುಗೆ ಸಿಬ್ಬಂದಿ ಅಡುಗೆ ಕೋಣೆಗೆ ಬೀಗ ಹಾಕಿಕೊಂಡು ತೆರಳಿದ್ದಾರೆ. ಇದರಿಂದಾಗಿ ಕಳೆದ 2-3 ದಿನಗಳಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟ ಸ್ಥಗಿತವಾಗಿದೆ.
ಈ ಬಗ್ಗೆ ದಲಿತ ಮುಖಂಡರು ಶಿಕ್ಷಣ ಇಲಾಖೆ, ಪಿಡಿಓ, ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಅಡುಗೆ ಸಿಬ್ಬಂದಿಯನ್ನು ವಜಾ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ. ಅಲ್ಲದೇ ಘಟನೆ ನಡೆದು ಮೂರು ದಿನವಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.