ಉಪನೋಂದಣಾಧಿಕಾರಿ ಕಚೇರಿಗಳಲ್ಲಿನ ಲಂಚಾವತಾರ ನಿಲ್ಲಿಸುವುದಾಗಿ ಹೇಳಿದ್ದ ಸಚಿವ ಅಶೋಕ, ಒಮ್ಮೆ ತುಮಕೂರಿನ ಕಚೇರಿಗೆ ಭೇಟಿ ನೀಡಬೇಕು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2021 | 6:54 PM

ಕಂದಾಯ ಸಚಿವ ಆರ್ ಅಶೋಕ ಅವರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಯಲ್ಲಿರುವ ಪ್ರಚಂಡ ಲಂಚಾವತಾರವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಅದು ಯಾವಾಗ ಸಾಧ್ಯವಾಗಲಿದೆ ಅಂತ ಅವರೇ ಹೇಳಬೇಕು.

ನೀವು ಒಂದು ಜಮೀನಾದರೂ ಖರೀದಿಸಿ ಇಲ್ಲವೇ ಎಕರೆಗಳಷ್ಟು, ಅದನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಆದರೆ ನೋಂದಣಿ ಮಾಡಿಸಿಕೊಳ್ಳವುದು ಎಷ್ಟು ಕಷ್ಟ ಅಂತ ಆ ಕಚೇರಿಗಳಿಗೆ ಎಡತಾಕಿದವರಿಗೆ ಮಾತ್ರ ಗೊತ್ತು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸಮಾಡುವವರು ಕುಬೇರರು ಅಂತ ಹೇಳಲಾಗುತ್ತದೆ. ನೋಂದಣಿ ಮಾಡಿಸಿಕೊಳ್ಳಲು ಬರುವ ಜನ ಇಲ್ಲ ಎಲ್ಲದಕ್ಕೂ ಕಾಸು ಬಿಚ್ಚಬೇಕು. ಇಲ್ಲಿನ ಚಪರಾಸಿಯಿಂದ ಹಿಡಿದು ಸಬ್-ರಿಜಿಸ್ಟ್ರಾರ್ ವರೆಗಿನ ಅಧಿಕಾರಿಗಳು ಪರ್ಸೆಂಟೇಜ್ ನಿಗದಿ ಮಾಡಿಕೊಂಡಿರುತ್ತಾರೆ. ಅವರೆಲ್ಲರಿಗೆ ಅವರವರ ಯೋಗ್ಯತೆಗನುಗುಣವಾಗಿ ಭಿಕ್ಷೆ ಚೆಲ್ಲಿದ ನಂತರವೇ ನಿಮ್ಮ ಫೈಲಿನ ಸರಿದಾಟ ಆರಂಭವಾಗುತ್ತದೆ.

ಕಂದಾಯ ಸಚಿವ ಆರ್ ಅಶೋಕ ಅವರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಯಲ್ಲಿರುವ ಪ್ರಚಂಡ ಲಂಚಾವತಾರವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಅದು ಯಾವಾಗ ಸಾಧ್ಯವಾಗಲಿದೆ ಅಂತ ಅವರೇ ಹೇಳಬೇಕು. ಒಂದು ಪಕ್ಷ ಖುದ್ದು ಸಚಿವರೇ ತಮ್ಮ ಆಸ್ತಿಯನ್ನು ನೋಂದಣಿ ಮಾಡಿಸಿಕೊಳ್ಳಲು ಅಲ್ಲಿಗೆ ಹೋದರೆ ಅವರು ಸಹ ಕಾಸು ಬಿಚ್ಟಬೇಕಾಗುತ್ತದೆ! ಈ ಕಚೇರಿಗಳಲ್ಲಿ ಲಂಚ ಅಷ್ಟರಮಟ್ಟಿಗೆ ಹಾಸುಹೊಕ್ಕಿದೆ.

ಇಲ್ಲಿರುವ ವಿಡಿಯೋವನ್ನೊಮ್ಮೆ ನೋಡಿ. ಇದು ತುಮಕೂರಿನ ಉಪನೋಂದಣಾಧಿಕಾರಿ ಕಚೇರಿ. ಅದರ ಮುಂದೆ ಕೊನೆಯೇ ಕಾಣದ ಸಾಲಿನಲ್ಲಿ ಜನ ನಿಂತಿದ್ದಾರೆ. ಅಂದಹಾಗೆ ಇವರು ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವುದು ಕೇವಲ ಟೋಕನ್ ಕಲೆಕ್ಟ್ ಮಾಡಲು. ನಿಂತವರಲ್ಲಿ ಕೆಲವರು ಬೆಳಗ್ಗೆ 7 ಗಂಟೆಗೆ ಬಂದಿದ್ದರೆ ಸರತಿಯ ಮುಂಭಾಗದಲ್ಲಿರುವ ಹಿರಿಯರೊಬ್ಬರು ಬೆಳಗ್ಗೆ 5:30 ಕ್ಕೆ ಬಂದಿದ್ದಾರಂತೆ.

ಅಂದಹಾಗೆ, ಇದು ಮೂರು ದಿನಗಳಿಂದ ನಡೆಯುತ್ತಿದೆಯಂತೆ. ಪ್ರತಿದಿನ ಬೆಳಗ್ಗೆಯೇ ಬಂದುಬಿಡುವ ಜನ ಸಾಯಂಕಾಲದವರೆಗೆ ತಾವು ನಿಂತ ಸ್ಥಳದಿಂದ ಒಂದಿಂಚೂ ಕದಲದೆ ಹಸಿದು, ಬಾಯಾರಿ ತಮ್ಮ ತಮ್ಮ ಮನೆಗಳಿಗೆ ವಾಪಸ್ಸು ಹೋಗುತ್ತಾರೆ.

ಮರುದಿನ ಬೆಳಗ್ಗೆ ಒಂದು ಹೊಸ ಆಶಾವಾದದೊಂದಿಗೆ ಪುನಃ ಕಚೇರಿಗೆ ತೆರಳುತ್ತಾರೆ. ಮತ್ತದೇ ರಾಗ ಅದೇ ತಾಳ-ಸರ್ವರ್ ಡೌನ್ ಆಗಿದೆ, ಇವತ್ತು ಟೋಕನ್ ಸಿಗಲ್ಲ ನಾಳೆ ಬನ್ನಿ ಅಂತ ಕಚೇರಿಯ ಸಿಬ್ಬಂದಿ ಸಾಯಂಕಾಲದ ಸಮಯ ಅವರಿಗೆ ಹೇಳುತ್ತಾರೆ.

ತುಮಕೂರಿನ ಜನಪ್ರತಿನಿಧಿಗಳಿಗೆ ತಮ್ಮನ್ನು ಆರಿಸಿದ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ, ಕೂಡಲೇ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಅಸಲಿಗೆ ನಡೆಯುತ್ತಿರುವುದಾದರೂ ಏನು ಅನ್ನೋದನ್ನು ಪರಿಶೀಲಿಸಬೇಕು.

ಇದನ್ನೂ ಓದಿ:  Viral Video: ಓರ್ವನಿಗಾಗಿ ಇಬ್ಬರು ಯುವತಿಯರ ಫೈಟಿಂಗ್​; ರಸ್ತೆಯಲ್ಲೇ ಜಗಳವಾಡಿದ ವಿಡಿಯೋ ವೈರಲ್