ಕಾರ್ಕಳ ಅತ್ಯಾಚಾರ ಪ್ರಕರಣ; ಕ್ರಿಮಿನಲ್​ಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ: ಸುನೀಲ ಕುಮಾರ, ಶಾಸಕ

|

Updated on: Aug 24, 2024 | 6:06 PM

ಮುಖ್ಯಮಂತ್ರಿಯವರ ಆದ್ಯತೆ ಏನು ಅನ್ನೋದೇ ಗೊತ್ತಾಗುತ್ತಿಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಅವರ ಆದ್ಯತೆಯಾಗಿದ್ದರೆ ಮಹಿಳೆಯರ ರಕ್ಷಣೆ ಹೇಗಾದೀತು? ಕ್ರಿಮಿನಲ್ ಗಳಿಗೆ ಪೊಲೀಸರ ಭಯ ಇಲ್ಲದಂತಾಗಿರುವಾಗ ಸರ್ಕಾರದ ಮೌನ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತದೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸುಲಿಗೆ, ಕೊಲೆ ಮತ್ತು ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿವೆ, ಅಪರಾಧಿ ಮಾನಸಿಕತೆಯ ದುರುಳರಿಗೆ ಪೊಲೀಸರ ಭಯ ಇಲ್ಲವಾಗಿಬಿಟ್ಟಿದೆ ಎಂದು ಬಿಜೆಪಿ ಶಾಸಕ ಸುನೀಲ ಕುಮಾರ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಶಾಸಕ ಕಾರ್ಕಳದಲ್ಲಿ ಹಿಂದೂ ಯುವತಿಯೊಬ್ಬಳನ್ನು ಅಪಹರಿಸಿ ಅಮಲೇರುವ ಪದಾರ್ಥವನ್ನ ನೀಡಿ ದುರುಳರು ಅತ್ಯಾಚಾರವೆಸಗಿದ್ದಾರೆ. ಯುವಕರಿಗೆ ಡ್ರಗ್ಸ್ ಎಲ್ಲಿಂದ ಸಿಕ್ಕವು? ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸುತ್ತಾರೆಂದರೆ ಅವರ ಹಿಂದೆ ಒಂದು ಶಕ್ತಿ ಇರುವಂತಿದೆ. ಜಿಲ್ಲಾಡಳಿತ ಮತ್ತು ಪೊಲೀಸರು ಆ ಶಕ್ತಿ ಯಾವುದು ಅನ್ನೋದನ್ನು ಪತ್ತೆ ಮಾಡಿ ಅವರ ಹುಟ್ಟಡಗಿಸಬೇಕು ಎಂದು ಸುನೀಲ ಕುಮಾರ ಹೇಳಿದರು.

ಹಿಂದೆ ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಯ ಕೊಲೆಯಾದಾಗ ಅದರ ಹಿಂದೆ ಲವ್ ಜಿಹಾದ್ ಇದೆ ಅಂತ ಬಿಜೆಪಿ ಹೇಳಿತ್ತು, ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಅದನ್ನು ಅಲ್ಲಗಳೆದಿದ್ದರು. ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ಹಬ್ಬುತ್ತಿರುವ ಮತ್ತು ಜಿಹಾದ್ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ರಾಜಕೀಯ ಮೇಲಾಟಗಳನ್ನು ಬಿಟ್ಟು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು, ಕಾರ್ಕಳ ಸಂತ್ರಸ್ತೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು ಮತ್ತು ಆಕೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಶಾಸಕ ಸುನೀಲ ಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕಾರ್ಕಳ ಪ್ರಕರಣವನ್ನು ಸೆನ್ಸಿಟೈಸ್ ಮಾಡಲು ಬಿಡಲ್ಲ, ತಪ್ಪಿತಸ್ಥರಿಗೆ ಕಾನೂನುರೀತ್ಯಾ ಕ್ರಮ: ಪರಮೇಶ್ಬರ್

Follow us on