ವಿರೋಧ ಪಕ್ಷದ ಟೀಕೆಗಳು ಸಾಯುತ್ತವೆ ಅದರೆ ಸರ್ಕಾರದ ಕೆಲಸಗಳು ಉಳಿಯುತ್ತವೆ: ಡಿಕೆ ಶಿವಕುಮಾರ್

|

Updated on: Aug 21, 2024 | 4:08 PM

ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ಸರ್ಕಾರ ಸೊಪ್ಪು ಹಾಕಲ್ಲ, ಯಾಕೆಂದರೆ ಟೀಕೆಗಳು ಸಾಯುತ್ತವೆ ಮಾಡಿದ ಕೆಲಸಗಳು ಉಳಿಯುತ್ತವೆ ಎಂದು ಹೇಳಿದ ಶಿವಕುಮಾರ್ ರೈತರಿಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗಿದೆ, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ, ಅದು ತುಂಬಿದ ಮೇಲೆ ಪುನಃ ಬಾಗಿನ ಅರ್ಪಿಸುತ್ತೇವೆ ಎಂದರು.

ಕೊಪ್ಪಳ: ತುಂಗಾಭದ್ರಾ ನದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂಬಿ ಪಾಟೀಲ್, ಶಿವರಾಜ್ ತಂಗಡಗಿ ಮತ್ತು ಇತರ ನಾಯಕರೊಂದಿಗೆ ಬಾಗಿನ ಅರ್ಪಿಸಿದ ನಂತರ ಜಿಲ್ಲೆಯ ಗಿಣಿಗೇರ ಏರ್​ಸ್ಟ್ರಿಪ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತುಂಗಭದ್ರಾ ಜಲಾಶಯ ಸ್ಟಾಪ್​ಲಾಗ್ ಗೇಟ್ ಅಳವಡಿಕೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸುತ್ತಿದ್ದ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ಗೇಟ್ ಅಳವಡಿಕೆ ಕೆಲಸ ನಡೆಯುತ್ತಿದ್ದಾಗ ಇಡೀ ದೇಶದ ದೃಷ್ಟಿ ಅದರ ಮೇಲೆ ನೆಟ್ಟಿತ್ತು. ಅದು ವಿಫಲಗೊಂಡರೆ ತಮ್ಮ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲು ವಿರೋಧ ಪಕ್ಷದ ನಾಯಕರು ತುದಿಗಾಲಲ್ಲಿ ನಿಂತಿದ್ದರು, ಅದರೆ ದೇವರ ಕೃಪೆಯಿಂದ ಎಲ್ಲವೂ ಸುಗಮವಾಗಿ ನಡೆಯಿತು. ಸಚಿವರು, ಶಾಸಕರು 4 ದಿನಗಳ ಕಾಲ ಒಂದು ನಿಮಿಷವೂ ನಿದ್ದೆ ಮಾಡದೆ ಗೇಟ್ ಅಳವಡಿಕೆ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದರು. ಕೆಲಸವನ್ನು ಸಕಾಲಲ್ಲಿ ಪೂರ್ಣಗೊಳಿಸಿ ಈ ಭಾಗದ ರೈತರನ್ನು ಬದುಕಿಸಿಕೊಂಡ ಇಂಜಿನೀಯರಿಂಗ್ ಸಂಸ್ಥೆಗಳಿಗೆ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ, ಮತ್ತು ಕೆಲಸದಲ್ಲಿ ಭಾಗಿಯಾದವರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಇಷ್ಟರಲ್ಲೇ ಇಟ್ಟುಕೊಳ್ಳುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು ರಾಜ್ಯಪಾಲ, ಲೋಕಾಯುಕ್ತಗೆ ವಕ್ತಾರನಲ್ಲ, ಕೇವಲ ಕಾಂಗ್ರೆಸ್ ಪಕ್ಷದ ವಕ್ತಾರ: ಡಿಕೆ ಶಿವಕುಮಾರ್