ಹಿಜಾಬ್ ವಿಷಯದಲ್ಲಿ ಸಿದ್ದರಾಮಯ್ಯ ಸಾರ್ವಜನಿಕ ಮತ್ತು ಶೈಕ್ಷಣಿಕ ವಾತಾವರಣನ್ನು ಹಾಳುಮಾಡುತ್ತಿದ್ದಾರೆ: ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2022 | 7:15 PM

ತೀರ್ಪಿನಿಂದ ತೃಪ್ತರಾಗಿಲ್ಲದವರು ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ತೀರ್ಪಿನ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಅವಕಾಶ ಇದೆಯಾ? ಎಂದು ರವಿ ಸ್ಪೀಕರ್ ಅವರನ್ನು ಕೇಳುತ್ತಾರೆ.

ಹಿರಿಯ ಬಿಜೆಪಿ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳೂ (general secretary) ಅಗಿರುವ ಸಿ ಟಿ ರವಿ (CT Ravi) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಸದನದ ಹೊರಗೆ ಮತ್ತು ಒಳಗೂ ಮಾತಿನ ಯುದ್ಧ ನಡೆಯುತ್ತಿರುತ್ತದೆ ಮತ್ತು ಟ್ವೀಟ್ ಸಮರವೂ ಜಾರಿಯಲ್ಲಿರುತ್ತದೆ. ಗುರುವಾರದಂದು ಇಬ್ಬರು ಗಣ್ಯರ ಮಧ್ಯೆ ಸದನದಲ್ಲಿ ತೂ ತೂ-ಮೈ ಮೈ ನಡೆಯಿತು. ವಿಷಯ ಅದೇ-ಹಿಜಾಬ್. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರವಿ ಅವರಿಗೆ ಮಾತಾಡಲು ಅವಕಾಶ ನೀಡಿದಾಗ ಎದ್ದು ನಿಲ್ಲುವ ಅವರು ಕೋರ್ಟಿನ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಆರಂಭಿಸುತ್ತಾರೆ.

ಹಿಜಾಬ್ ವಿವಾದ ಪ್ರಕರಣ ಕುರಿತಂತೆ ರಾಜ್ಯ ಹೈಕೋರ್ಟ್ ಹತ್ತು ದಿನಗಳ ಕಾಲ ವಾದ ಪ್ರತಿವಾದಗಳನ್ನು ಆಲಿಸಿ ಅದರಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ಪ್ರಶ್ನೆಗೆ ತನ್ನ ತೀರ್ಪಿನಲ್ಲಿ ಉತ್ತರ ನೀಡಿದೆ. ತೀರ್ಪಿನಿಂದ ತೃಪ್ತರಾಗಿಲ್ಲದವರು ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ತೀರ್ಪಿನ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಅವಕಾಶ ಇದೆಯಾ? ಎಂದು ರವಿ ಸ್ಪೀಕರ್ ಅವರನ್ನು ಕೇಳುತ್ತಾರೆ.

ತಾನು ವಕೀಲನಲ್ಲ ಆದರೆ ಸಿದ್ದರಾಮಯ್ಯ ವಕೀಲರು ಮತ್ತು ಅನುಭವಿಗಳು. ಅವರು ತನಗೆ ಹೇಳಲಿ ಸಾರ್ವಜನಿಕ ವಾತಾವರಣ ಮತ್ತು ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುವ ಅವಕಾಶವಿದೆಯಾ? ಸದನದಲ್ಲಿ ಚರ್ಚೆಯಾಗಬೇಕಿರುವ ವಿಷಯ ಸದನದ ಹೊರಗಡೆ ಚರ್ಚೆಯಾಗುತ್ತಿದೆ. ಸಮವಸ್ತ್ರದ ಅರ್ಥವೇನು? ಅದಕ್ಕೆ ಯಾಕೆ ಅಪಾರ್ಥಗಳನ್ನು ಕಲ್ಪಿಸಲಾಗುತ್ತಿದೆ? ಯಾರೇ ಅಗಲಿ, ಹಿಜಾಬ್ ವಿವಾದವನ್ನು ವೋಟ್ ಬ್ಯಾಂಕ್ ಗಾಗಿ ಬಳಸಿಕೊಳ್ಳಬಾರದು, ಹಾಗೆ ಮಾಡುವುದು ಹೀನ ಕೆಲಸ ಮತ್ತು ಇಂಥ ಹೀನ ಕೆಲಸ ಮಾಡುವವರಿಗಿಂತ ಮಹಾ ಪಾಪಿಗಳು ಬೇರೊಬ್ಬರಿಲ್ಲ ಎಂದು ರವಿ ಹೇಳುತ್ತಿದ್ದಂತೆಯೇ ಸಿದ್ದರಾಮಯ್ಯ ಮತ್ತು ಯುಟಿ ಖಾದರ್ ಏನನ್ನೋ ಹೇಳುತ್ತಾರೆ, ಅದು ಸರಿಯಾಗಿ ಕೇಳಿಸುವುದಿಲ್ಲ.

ಇದನ್ನೂ ಓದಿ:  ಹಿಜಾಬ್ ಧರಿಸುವ ಅವಕಾಶವಿಲ್ಲ ಅಂತಾದರೆ ಪರೀಕ್ಷೆಗಳನ್ನೂ ಬರೆಯಲ್ಲ ಎಂದರು ಚಾಮರಾಜನಗರ ಕಾಲೇಜೊಂದರ ವಿದ್ಯಾರ್ಥಿನಿಯರು