ಸಿಎಂ ಸ್ಥಾನಕ್ಕಾಗಿ ಸಚಿವರಿಗೆ ಬಿಗ್ ಆಫರ್ ಕೊಟ್ರಾ ಡಿ.ಕೆ. ಶಿವಕುಮಾರ್?
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಪಟ್ಟದ ಆಟ ಈಗ ಮತ್ತಷ್ಟು ಕುತೂಹಲಕಾರಿ ಘಟ್ಟ ತಲುಪಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ತಂತ್ರಗಾರಿಕೆಗಳ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಸಿಎಲ್‌ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷದ) ಸಭೆಯನ್ನು ಕರೆಯುವ ಸಂದರ್ಭ ಬಂದರೆ ಏನು ಮಾಡಬೇಕು ಎಂಬ ಪ್ಲ್ಯಾನ್ ಕೂಡ ಸಿದ್ಧವಾಗಿದ್ದು, ಮತ್ತೊಂದೆಡೆ ಹಾಲಿ ಮಂತ್ರಿಗಳಿಗೂ ಡಿಕೆಶಿ ಬಿಗ್ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ನವೆಂಬರ್ 24: ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿರೋ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸ್ಟ್ರಾಟಜಿ ಏನು ಎಂಬ Exclusive ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಸಿಎಲ್‌ಪಿ ಸಭೆ ಕರೆದರೆ ಏನು ಮಾಡಬೇಕು ಎಂಬ ಬಗ್ಗೆಯೂ ಡಿಕೆಶಿ ಪ್ಲ್ಯಾನ್ ರೆಡಿಯಾಗಿದೆ. ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಂದ ಮತದಾನ ನಡೆದಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಶಾಸಕರು ಮತ ಚಲಾಯಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಪಡೆದಿದ್ದರು. ಆದರೆ ಅಂದು ಬಹಿರಂಗವಾಗಿ ಮತದಾನ ನಡೆದಿದ್ದು, ಯಾವ ಶಾಸಕರು ಯಾರ ಪರ ಎಂಬುದು ಗೊತ್ತಾಗಿತ್ತು. ಹೀಗಾಗಿ ಈ ಬಾರಿ ಸ್ಥಿತಿ ಮತಕ್ಕೆ ಹಾಕುವ ಹಂತ ತಲುಪಿದರೆ CLP ನಾಯಕನ ಆಯ್ಕೆಗೆ ಗೌಪ್ಯ ಮತದಾನ ನಡೆಸುವಂತೆ ಪಟ್ಟು ಹಿಡಿಯಲು ಡಿಕೆಶಿ ಬಣ ಪ್ಲ್ಯಾನ್ ಮಾಡಿದೆ. ಗೌಪ್ಯ ಮತದಾನ ನಡೆದರೆ ಹೆಚ್ಚು ಶಾಸಕರ ಬೆಂಬಲದ ಲೆಕ್ಕಾಚಾರ ಇವರದ್ದಾಗಿದ್ದು,60ಕ್ಕೂ ಹೆಚ್ಚು ಶಾಸಕರ ಬೆಂಬಲ ಸಿಗಬಹುದೆಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ. ಹೀಗಾಗಿ ಒಬ್ಬೊಬ್ಬ ಶಾಸಕರನ್ನೂ ವಿಶ್ವಾಸಕ್ಕೆ ಪಡೆಯಲು ಯತ್ನ ನಡೆಸಿದ್ದು, ಸಚಿವರ ಪೈಕಿ ಹಲವರಿಗೆ ಸಚಿವ ಸ್ಥಾನ ಮುಂದುವರಿಕೆಯ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
