ಜೈಲಲ್ಲಿ ದರ್ಶನ್​ರನ್ನು ಭೇಟಿಯಾಗಿ ಬಂದ ವಕೀಲ ನಾರಾಯಣಸ್ವಾಮಿ ಸಾಮಾಜಿಕ ಹೊಣೆಗಾರಿಕೆ ಬಗ್ಗೆ ಮಾತಾಡಿದರು

|

Updated on: Jul 10, 2024 | 8:41 PM

ಕಾವೇರಿ ನದಿ ನೀರಿಗಾಗಿ ವಕೀಲರು ಹೋರಾಟ ನಡೆಸಿದ ಸಮಯದಲ್ಲಿ ಪೊಲೀಸರು ಸುಖಾಸುಮ್ಮನೆ ಕೇಸುಗಳನ್ನು ದಾಖಲಿಸಿದಾಗ ತಾನು ಅವರ ಪರ ಹೋರಾಡಿ 180 ವಕೀಲರನ್ನು ಕೇಸುಗಳಿಂದ ಮುಕ್ತ ಮಾಡಿದ್ದಾಗಿ ಹೇಳಿದ ವಕೀಲ ನಾರಾಯಣಸ್ವಾಮಿ ಯಾರಿಂದಲೂ ಫೀಸು ತೆಗೆದುಕೊಂಡಿರಲಿಲ್ಲ ಎಂದರು.

ಆನೇಕಲ್ (ಬೆಂಗಳೂರು): ಇಂದು ಸೆಂಟ್ರಲ್ ಜೈಲಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳನ್ನು ಭೇಟಿಯಾಗಿ ಹೊರಬಂದ ವಕೀಲ ನಾರಾಯಣಸ್ವಾಮಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕೀಲರು ಕೇವಲ ಹಣಕ್ಕಾಗಿ ಅರೋಪಿಗಳ ಪರ ವಾದಿಸುತ್ತಾರೆ ಅಂತ ಭಾವಿಸುವುದು ತಪ್ಪು, ತನ್ನಂಥ ಹಲವಾರು ವಕೀಲರು ಫೀಸು ಕೊಡಲಾಗದ ಬಡ ಆರೋಪಿಗಳ ಪ್ರಕರಣಗಳನ್ನೂ ಕೈಗೆತ್ತಿಕೊಳ್ಳುತ್ತಾರೆ ಎಂದು ನಾರಾಯಣಸ್ವಾಮಿ ಹೇಳಿದರು. ವಕೀಲ ವೃತ್ತಿಯು ಸೇವಾ ಪ್ರಾಮುಖ್ಯತೆ ಮತ್ತು ಆದ್ಯತೆಯುಳ್ಳ ವೃತ್ತಿಯಾಗಿದೆ, ಎಲ್ಲರೂ ಹಣದ ಬಗ್ಗೆ ಯೋಚನೆ ಮಾಡಲ್ಲ, ತಾನು ದರ್ಶನ್ ಮತ್ತು ಪವಿತ್ರಾ ಗೌಡರ ವಕೀಲನಾಗಿರುವುದರಿಂದ ಕೋಟ್ಯಾಂತರ ಫೀಸು ಸಿಗುತ್ತದೆ ಅಂತ ಭಾವಿಸುವುದು ತಪ್ಪು. ಅವರೊಂದಿಗಿರುವ 4-5 ಆರೋಪಿಗಳು ತೀರ ಬಡವರು, ತಮ್ಮನ್ನು ಯಾಕೆ ಸೆರೆವಾಸದಲ್ಲಿಡಲಾಗಿದೆ ಅಂತಲೇ ಅವರಿಗೆ ಗೊತ್ತಿಲ್ಲ, ಅವರ ಪರವಾಗಿಯೂ ತಾನು ವಾದಿಸುತ್ತಿರುವುದಾಗಿ ಅವರು ಹೇಳಿದರು. ದರ್ಶನ್ ತನ್ನನ್ನೇ ವಕೀಲನಾಗಿ ಮುಂದುವರಿಸುತ್ತಾರೆ ಅಂತ ಖಾತ್ರಿ ಏನೂ ಇಲ್ಲ, ಅವರು ಮುಂದಿನ ದಿನಗಳಲ್ಲಿ ತನ್ನ ಬದಲಿಗೆ ಬೇರೆ ವಕೀಲನನ್ನು ನಿಯುಕ್ತಿ ಮಾಡಿಕೊಳ್ಳಬಹುದು ಎಂದು ನಾರಾಯಣ ಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    16ನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲು ವಾಸ; ಸರಿಯಾಗಿ ಊಟ, ನಿದ್ರೆ ಮಾಡದೆ ಹೈರಾಣು